ಜಗಜೀವನ್, ಅಂಬೇಡ್ಕರ್ ಜಯಂತ್ಯುತ್ಸವಗಳ ಆಚರಣೆಗೆ ಸಹಕಾರವಿರಲಿ

03 jlr
Published on

ಜಗಳೂರು: ಬಾಬು ಜಗಜೀವನ್​ರಾಮ್ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವಗಳನ್ನು ಏಕಕಾಲದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ಎಲ್ಲ ಸಮುದಾಯದವರು ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಜಗಜೀವನ್​ರಾಮ್ ಹಾಗೂ ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ದಸಂಸ ಸಂಚಾಲಕ ಮಲೆಮಾಚಿಕೆರೆ ಸತೀಶ್ ಮಾತನಾಡಿ, ಇಬ್ಬರು ಮಹನೀಯರ ಜನ್ಮದಿನವನ್ನು ಕೇವಲ ಭಾವಚಿತ್ರಗಳ ಪೂಜೆಗೆ ಸೀಮಿತಗೊಳಿಸಬಾರದು. ಸಾಂಕೇತಿಕವಾಗಿ ತಾಲೂಕು ಕಚೇರಿಯಲ್ಲಿ ಮುಗಿಸಿಕೊಂಡು ಬಯಲು ರಂಗಮಂದಿರದ ವಿಶಾಲವಾದ ಆವರಣದಲ್ಲಿ ಮೆರವಣಿಗೆಗೆ ಸಾರೋಟ್, ವಿವಿಧ ಕಲಾ ತಂಡಗಳನ್ನು ಕರೆಸಿ ಅದ್ದೂರಿಯಾಗಿ ಆಚರಿಸಬೇಕು. ಸಾಧಕರಿಗೆ ಸನ್ಮಾನ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕರ ಆಪ್ತ ಸಹಾಯಕ ಪಲ್ಲಾಗಟ್ಟೆ ಶೇಖರಪ್ಪ ಮಾತನಾಡಿ, ತುರ್ತು ಕಾರ್ಯನಿಮಿತ್ತ ಶಾಸಕರು ಬೆಂಗಳೂರಿಗೆ ಹೋಗಿದ್ದು, ಜಗಜೀವನ್ ಮತ್ತು ಅಂಬೇಡ್ಕರ್ ಜಯಂತ್ಯುತ್ಸವಗಳನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದರು.

ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಗೌರಿಪುರ ಕುಬೇರಪ್ಪ ಮಾತನಾಡಿದರು.

ತಾಪಂ ಇಒ ಕೆಂಚಪ್ಪ, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಸಮಾಜ ಕಲ್ಯಾಣಾಧಿಕಾರಿ ಪರಮೇಶ್ವರಪ್ಪ, ಜಿಪಂ ಎಇಇ ಶಿವಮೂರ್ತಿ, ಅರಣ್ಯಾಧಿಕಾರಿ ಮಹೇಶ್ವರಪ್ಪ, ನಿವೃತ್ತ ಅಧಿಕಾರಿ ಬಿ. ಮಹೇಶ್ವರಪ್ಪ, ಮುಖಂಡರಾದ ಜಿ.ಎಚ್. ಶಂಭುಲಿಂಗಪ್ಪ, ಗ್ಯಾಸ್ ಓಬಣ್ಣ, ಪಪಂ ಮಾಜಿ ಅಧ್ಯಕ್ಷ ಮಂಜುನಾಥ್, ಮಾ.ದ.ಮೀ.ಹೋ ಸಮಿತಿ ತಾಲೂಕಾಧ್ಯಕ್ಷ ಹನುಮಂತಪ್ಪ, ಗೌರಿಪುರ ಸತ್ಯಮೂರ್ತಿ, ದಸಂಸ ಸಂಚಾಲಕ ಕುಬೇಂದ್ರಪ್ಪ ಸೇರಿ ಮತ್ತಿತರರಿದ್ದರು.

ಗೈರಾದವರಿಗೆ ನೋಟಿಸ್ ನೀಡಿ: ಬೆಳಗ್ಗೆ 10.3 0ಕ್ಕೆ ಕರೆದಿದ್ದ ಪೂರ್ವಭಾವಿ ಸಭೆಗೆ 11 ಗಂಟೆಯಾದರೂ ಕೆಲವೇ ಅಧಿಕಾರಿಗಳು ಪಾಲ್ಗೊಂಡಿದ್ದರು. ಜಯಂತ್ಯುತ್ಸವಗಳ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಭಾಗವಹಿಸುತ್ತಿಲ್ಲ. ಮೀಸಲಾತಿಯಲ್ಲಿ ಉದ್ಯೋಗ ಪಡೆದರೂ ಸಭೆಗೆ ಬಾರದೇ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಗೈರಾದವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ತಹಸೀಲ್ದಾರ್ ಅವರನ್ನು ಸತೀಶ್, ಸತ್ಯಮೂರ್ತಿ, ಕುಬೇಂದ್ರಪ್ಪ, ಚಂದ್ರಪ್ಪ, ರಾಜಪ್ಪ ಒತ್ತಾಯಿಸಿದರು.

ಕುಂದು- ಕೊರತೆ ಸಭೆ ಮರೆತ ಪೊಲೀಸ್ ಇಲಾಖೆ: ತಾಲೂಕಿನಲ್ಲಿ ಎಸ್ಸಿ- ಎಸ್ಟಿ ಕಾಲನಿಗಳಲ್ಲಿ ಕುಂದು- ಕೊರತೆ ಸಭೆ ಮಾಡುವುದನ್ನು ಪೊಲೀಸ್ ಇಲಾಖೆ ಮರೆತು ಬಿಟ್ಟಿದೆ ಎಂದು ಮಾ.ದ.ಮೀ.ಹೋ ಸಮಿತಿ ಜಿಲ್ಲಾಧ್ಯಕ್ಷ ಕುಬೇಂದ್ರಪ್ಪ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್​ಐ ಗಾದಿಲಿಂಗಪ್ಪ ಅವರು, ಎಸ್ಪಿಯೊಂದಿಗೆ ರ್ಚಚಿಸಿ ಪ್ರತಿ ಹಳ್ಳಿಗಳಲ್ಲೂ ಸಭೆ ಆಯೋಜಿಸಲಾಗುವುದು. ಏನಾದರೂ ಸಮಸ್ಯೆಗಳಿರುವ ಗ್ರಾಮಗಳಿದ್ದರೆ ಗಮನಕ್ಕೆ ತನ್ನಿ ಎಂದರು.

ಮುಖಂಡ ಹಟ್ಟಿ ತಿಪ್ಪೇಸ್ವಾಮಿ ಮಾತನಾಡಿ, ದೌರ್ಜನ್ಯಕ್ಕೆ ಒಳಗಾಗುವ ಮಾದಿಗರ ಕೇರಿಗಳಲ್ಲಿ ಸಭೆ ಮಾಡುವುದಕ್ಕಿಂತ ಎಲ್ಲ ಸಮುದಾಯಗಳ ಸಭೆ ಮಾಡಿ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net