ಹಕ್ಕುಪತ್ರ ವಿತರಣೆ 27ರಂದು

25-HNL-3 S Renuka
Published on

ವಿಜಯವಾಣಿ ಸುದ್ದಿಜಾಲ ಹಾನಗಲ್ಲ

ಕೃಷಿ ಜಮೀನು ಹಾಗೂ ಬೇರೆಯವರ ಖಾಸಗಿ ನಿವೇಶನದಲ್ಲಿ ದಾಖಲೆ ರಹಿತವಾಗಿ ಮನೆ ಕಟ್ಟಿಕೊಂಡು ವಾಸವಾಗಿರುವ ಕುಟುಂಬಗಳಿಗೆ ಮನೆ ಮಾಲಿಕತ್ವದ ಇ-ಸ್ವತ್ತು ದಾಖಲೆಯ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಅ. 27ರಂದು ತಾಲೂಕಿನ ಕೆಲವರಕೊಪ್ಪ ಗ್ರಾಮದ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಎಸ್.ರೇಣುಕಾ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಅನಧೀಕೃತವಾಗಿ ಮನೆ ಕಟ್ಟಿಕೊಂಡಿರುವ ಅಂದಾಜು 13,000 ಕುಟುಂಬಗಳು ದಾಖಲೆಗಳಿಲ್ಲದೇ ಸರ್ಕಾರಿ ಮೂಲ ಸೌಕರ್ಯಗಳಿಂದ ವಂಚಿತವಾಗುತ್ತಿವೆ. ಇದನ್ನು ಅಧಿಕೃತಗೊಳಿಸುವ ಉದ್ದೇಶದಿಂದ ಕಳೆದ 2 ವರ್ಷಗಳಿಂದ ಸವೇರ್ರ್ ಕಾರ್ಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ 21 ಹೊಸ ಗ್ರಾಮ, 132 ಉಪ ಗ್ರಾಮ ರಚಿಸಲಾಗಿದೆ. ಒಟ್ಟು 153 ನೂತನ ಗ್ರಾಮಗಳ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಈಗಾಗಲೇ 45 ರಷ್ಟು ಗ್ರಾಮಗಳಿಗೆ ಅನುಮೋದನೆ ದೊರಕಿದೆ. ಸರ್ಕಾರ ಈ ಯೋಜನೆ ಅನುಷ್ಠಾನಕ್ಕಾಗಿ ಹಾನಗಲ್ಲ ತಾಲೂಕನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆಲವರಕೊಪ್ಪ ಹಾಗೂ ಉಪ್ಪುಣಸಿ ಗ್ರಾಮಗಳ ಫಲಾನುಭವಿಗಳಿಗೆ ಹಕ್ಕು ಪತ್ರಗಳ ವಿತರಣೆ ನಡೆಯಲಿದೆ. ಶಾಸಕ ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಪಾಲ್ಗೊಂಡು, ಕೆಲವರಕೊಪ್ಪ ಗ್ರಾಮದ 79 ಹಾಗೂ ಉಪ್ಪುಣಸಿ ಗ್ರಾಮದ 140 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಆಲದಕಟ್ಟಿ, ಬಿಂಗಾಪುರ ಸೇರಿದಂತೆ ಮತ್ತಷ್ಟು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ವಿವರಿಸಿದರು.

13,000 ಮನೆಗಳ ಕುಟುಂಬದ ಪಟ್ಟಿ: ತಾಲೂಕಿನಲ್ಲಿ ದಾಖಲೆ ರಹಿತವಾಗಿರುವ 13,000 ಮನೆಗಳ ಕುಟುಂಬದ ಪಟ್ಟಿ ಮಾಡಲಾಗಿದೆ. ಇವುಗಳಲ್ಲಿ ಈಗಾಗಲೇ 8,600 ಮನೆಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಇನ್ನೂ 4,000 ಮನೆಗಳ ದಾಖಲೀಕರಣ ಬಾಕಿ ಉಳಿದಿವೆ. ಇವುಗಳಲ್ಲಿ ಶೇ.60 ರಷ್ಟು ಮನೆಗಳು ಸರ್ಕಾರಿ ಜಮೀನುಗಳಲ್ಲಿ ನಿರ್ಮಿಸಿಕೊಂಡಿದ್ದಾರೆ. ಶೇ.40ರಷ್ಟು ಮನೆಗಳು ಖಾಸಗಿ ಜಮೀನುಗಳಲ್ಲಿ ಕಟ್ಟಿಕೊಳ್ಳಲಾಗಿವೆ. ಕಳೆದ 2 ವರ್ಷಗಳಿಂದ ಕಂದಾಯ ಇಲಾಖೆ ಪರಿಶ್ರಮವಹಿಸಿ, ಸರ್ವೇ ಕೈಗೊಂಡು, ಕಂದಾಯ ಗ್ರಾಮಗಳನ್ನಾಗಿ ರಚಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net