

ಆನೇಕಲ್: ಲಾಕ್‌ಡೌನ್‌ನಿಂದಾಗಿ ವ್ಯಾಪಾರವಿಲ್ಲದೆ ಜಮೀನುಗಳಲ್ಲೇ ತರಕಾರಿ, ಹಣ್ಣು, ಹೂವು ಕೊಳೆಯುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿಕರ ಸಮಸ್ಯೆ ಆಲಿಸಲು ತಾಲೂಕಿನ ವಿವಿಧ ಗ್ರಾಮದ ತೋಟಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ಭೇಟಿ ನೀಡಿದ್ದ ಬೆನ್ನಲ್ಲೇ, ಸೋಮವಾರ ತಹಸೀಲ್ದಾರ್ ಮಹಾದೇವಯ್ಯ ಅಧಿಕಾರಿಗಳೊಂದಿಗೆ ತೋಟಗಳಲ್ಲಿ ಪರಿಶೀಲನೆ ನಡೆಸಿದರು.
ತಹಸೀಲ್ದಾರ್ ನೇತೃತ್ವದ ತಂಡ ದೊಡ್ಡಹಾಗಡೆ, ಸೊಪ್ಪಹಳ್ಳಿ, ಅವಡದೇನಹಳ್ಳಿ, ಕೂನಿಮಡಿವಾಳ ಗ್ರಾಮಗಳ ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈಗಾಗಲೇ 900 ರೈತರ 2,000 ಎಕರೆ ಪ್ರದೇಶದ ಬೆಳೆ ನಷ್ಟವಾಗಿ ಸುಮಾರು 211 ಕೋಟಿ ರೂ. ನಷ್ಟದ ಅಂದಾಜು ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಎರಡ್ಮೂರು ದಿನಗಳಲ್ಲಿ ಮತ್ತಷ್ಟು ನಿಖರ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ತಾಲೂಕಿನ ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದಾರೆ. ಕೆಲ ರೈತರು ಲಕ್ಷಾಂತರ ರೂ. ಸಾಲ ಮಾಡಿ ಗ್ರೀನ್‌ಹೌಸ್ ನಿರ್ಮಿಸಿ ಕ್ಯಾಪ್ಸಿಕಂ, ಜರ್ಬೇರಾ ಬೆಳೆಯುತ್ತಿದ್ದಾರೆ. ಆದರೀಗ ಕರೊನಾ ಛಾಯೆ ರೈತರಿಗೂ ನಷ್ಟ ಉಂಟುಮಾಡಿದೆ. ತೋಟದಲ್ಲಿ ಕಟಾವಿಗೆ ಬಂದಿರುವ ಹಣ್ಣು, ತರಕಾರಿಯನ್ನು ಕೇಳುವವರೇ ಇಲ್ಲದಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ದೊಡ್ಡಹಾಗಡೆ ರೈತ ಎನ್. ಶಂಕರ್ ಒತ್ತಾಯಿಸಿದರು.
ನಾಗನಾಯಕನಹಳ್ಳಿ ರೈತರ ತೋಟದಲ್ಲಿ ಕ್ಯಾಪ್ಸಿಕಂ ಬೆಳೆ ನೆಲಕಚ್ಚಿದೆ. ವಿದೇಶಕ್ಕೆ ರಫ್ತಾಗುತ್ತಿದ್ದ ಈ ಬೆಳೆ ಬಗ್ಗೆ ಶೀಘ್ರವೇ ಸರ್ಕಾರ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು.
ಅಧಿಕಾರಿಗಳಾದ ಶಿವಶಂಕರ್, ಧನಂಜಯ್, ದಿವಾಕರ್, ಜಿಪಂ ಸದಸ್ಯ ನಾಗೇಶ್ ರೆಡ್ಡಿ, ಮುಖಂಡರಾದ ಎಸ್.ಆರ್.ಟಿ. ಅಶೋಕ, ರೈತ ದೇವರಾಜು ಮತ್ತಿತರರಿದ್ದರು.
ಕರೊನಾತಂಕದಿಂದ ಆನೇಕಲ್ ತಾಲೂಕಿನಲ್ಲಿ ರೈತರ ಬೆಳೆ ಹಾನಿಯಾಗಿ ಅಂದಾಜು 211ಕೋಟಿ ರೂ. ನಷ್ಟವಾಗಿದೆ. ಆ ಪೈಕಿ ತರಕಾರಿ ಬೆಳೆದ ರೈತರಿಗೆ 50 ಕೋಟಿ ರೂ. ನಷ್ಟವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸರ್ಕಾರದ ಸೂಚನೆಯಂತೆ ಪರಿಹಾರ ತಲುಪಿಸುವ ಕೆಲಸ ಮಾಡುತ್ತೇವೆ. ಎಸ್. ಕೇಶವಮೂರ್ತಿ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ