ಜಯಂತ್ಯುತ್ಸವ ಆಚರಣೆ ತಾಲೂಕು ಆಡಳಿತದ ಸಹಕಾರ

chn oct 28 poorvabhavi sabhe. (1)
Published on

ಚನ್ನಗಿರಿ: ಕನಕ ಮತ್ತು ಒನಕೆ ಓಬವ್ವ ಜಯಂತಿಗಳನ್ನು ಅದ್ದೂರಿಯಾಗಿ ಆಚರಿಸಲು ಕುರುಬ ಮತ್ತು ಛಲವಾದಿ ಸಮಾಜದವರು ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಎನ್.ಜೆ. ನಾಗರಾಜ್ ತಿಳಿಸಿದರು.

ಇಲ್ಲಿನ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕನಕ ಹಾಗೂ ಒನಕೆ ಓಬವ್ವ ಜಯಂತ್ಯುತ್ಸವಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನ.8 ಕ್ಕೆ ಕನಕ ಜಯಂತಿ ಮತ್ತು ನ.11ಕ್ಕೆ ಒನಕೆ ಓಬವ್ವ ಜಯಂತಿ ಇರುವುದರಿಂದ ಎರಡು ಸಮಾಜದವರು ಒಪ್ಪಿಗೆ ನೀಡಿದರೆ ಒಂದೇ ವೇದಿಕೆಯಲ್ಲಿ ಇಬ್ಬರ ಜಯಂತಿಯನ್ನು ಮಾಡಬಹುದು ಅಥವಾ ಸಮುದಾಯದವರೇ ಮುಂದೆ ಬಂದು ಆಚರಣೆ ಮಾಡುತ್ತೇವೆ ಎನ್ನುವ ಭರವಸೆ ನೀಡಿದರೆ ತಾಲೂಕು ಆಡಳಿತದಿಂದ ಸಹಕಾರ ನೀಡಲಾಗುತ್ತದೆ ಎಂದರು.

ಕುರುಬ ಸಮಾಜದ ಅಧ್ಯಕ್ಷ ಕೆ.ಆರ್. ಗೋಪಿ ಮಾತನಾಡಿ, ಸಾಂಪ್ರದಾಯಿಕವಾಗಿ ನ.8 ರಂದು ಕನಕ ಜಯಂತಿಯನ್ನು ಕಚೇರಿಯಲ್ಲಿ ಮಾಡಬೇಕು, ಸಮಾಜದವರು ಭಾಗವಹಿಸುತ್ತೇವೆ. ಕಾರಣ ನ.6 ಮತ್ತು 7ಕ್ಕೆ ಪಟ್ಟಣದ ಕುರುಬ ಬೀದಿಯಲ್ಲಿ ಕಿರಿ ದೀಪಾವಳಿ ಹಬ್ಬ ಅಚರಣೆ ಇರುವುದರಿಂದ ಸಮಾಜದವರೆಲ್ಲ ಹಬ್ಬದ ಕೆಲಸದಲ್ಲಿರುತ್ತಾರೆ. ನಾವು ನ.10 ರಂದು ಆಚರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲದೇ ಒಂದೇ ವೇದಿಕೆಯಲ್ಲಿ ಎರಡು ಜಯಂತಿಗಳ ಆಚರಣೆ ಕಷ್ಟವಾಗುತ್ತದೆ ಎಂದು ಹೇಳಿದರು.

ಛಲವಾದಿ ಸಮಾಜದ ಮುಖಂಡ ಸಿ. ನಾಗರಾಜ್ ಮಾತನಾಡಿ, ಸಾಧಕರ ಜಯಂತಿಯನ್ನು ಎಲ್ಲಿ, ಯಾರಾದರೂ ಆಚರಣೆ ಮಾಡಿದರೂ ನಮ್ಮ ಸಮಾಜದ ಸಹಕಾರ ಇರುತ್ತದೆ. ಅಲ್ಲದೆ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಆಚರಣೆ ಮಾಡುತ್ತಾ ಬಂದಿದ್ದು, ಅದೇ ಮುಂದುವರಿಯಲಿ. ನಮ್ಮ ಸಮಾಜದವರು ಭಾಗವಹಿಸುತ್ತಾರೆ ಎಂದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಮಲ್ಲಿಕಾರ್ಜುನ, ಕುರುಬ ಸಮಾಜದ ತಾಲೂಕಾಧ್ಯಕ್ಷ ಶಿವಣ್ಣ, ಎ.ಸಿ. ಚಂದ್ರು, ಪುರಸಭೆ ಸದಸ್ಯ ಚಿಕ್ಕಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net