

ಮಾಯಕೊಂಡ: ಕಂದಾಯ ಇಲಾಖೆಯ ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಡಿಜಿಟಲ್ ತಂತ್ರಾಂಶದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗಿರುವ ಕಂದಾಯ ದಾಖಲೆಗಳನ್ನು ವಿತರಿಸಲು ಜಿಲ್ಲೆಯಲ್ಲಿ ಮಾಯಕೊಂಡ ನಾಡಕಚೇರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಡಾ.ಎಂ.ಬಿ. ಅಶ್ವಥ್ ತಿಳಿಸಿದರು.
ದಾವಣಗೆರೆ ತಾಲೂಕಿನ ತಾಲೂಕು ಕಚೇರಿಯಲ್ಲಿ ಬುಧವಾರ ಗಣಕೀಕೃತ ಹಳೆಯ ಭೂ ದಾಖಲೆಯನ್ನು ವಿತರಿಸಿ ಮಾತನಾಡಿದರು.
ಹಳೆಯ ಪಹಣಿ ಮುಟೇಶನ್ಗಳನ್ನು ಸಾರ್ವಜನಿಕರಿಗೆ ಡಿಜಿಟಲ್ ರೂಪದಲ್ಲಿ ಆನ್ಲೈನ್ ಮೂಲಕ ವಿತರಿಸಲು ಈಗಾಗಲೇ ಪ್ರಾರಂಭಿಸಲಾಗಿದೆ. ತಾಲೂಕು ಕಚೇರಿಗಳಿಗೆ ರೈತರ ಅಲೆದಾಟ ತಪ್ಪಿಸಲು ಹೋಬಳಿ ಕೇಂದ್ರದಲ್ಲಿರುವ ನಾಡಕಚೇರಿಗಳಲ್ಲಿ ಡಿಜಿಟಲ್ ದಾಖಲೆಗಳನ್ನು ವಿತರಣೆ ಮಾಡಲು ಇಲಾಖೆ ಆದೇಶ ನೀಡಿದ್ದು ಅದರಂತೆ ರಾಜ್ಯದಲ್ಲಿ ಒಟ್ಟು 12 ನಾಡಕಚೇರಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಜಿಲ್ಲೆಯ ಮಾಯಕೊಂಡ ನಾಡಕಚೇರಿಯು ಸೇರಿದೆ. ಕೆಲವೇ ದಿನಗಳಲ್ಲಿ ಡಿಜಿಟಲ್ ದಾಖಲಾತಿ ವಿತರಣೆ ಪ್ರಾರಂಭವಾಗುವುದು ಎಂದರು.
ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿರುವುದರಲ್ಲಿ ದಾವಣಗೆರೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ದಾವಣಗೆರೆ ತಾಲೂಕು ಸಹ ರಾಜ್ಯದಲ್ಲೇ ಅತಿ ಹೆಚ್ಚು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿರುವುದರಲ್ಲಿ ಪ್ರಥಮ ಸ್ಥಾನ ಪಡೆದಿದೆ. ಈಗಾಗಲೇ ತಾಲೂಕಿನಲ್ಲಿ 55 ಲಕ್ಷ ಪುಟಗಳಷ್ಟು ಭೂ ದಾಖಲೆಗಳು ಡಿಜಿಟಲೀಕರಣಗೊಂಡಿವೆ. ಇನ್ನೂ 50 ಲಕ್ಷಕ್ಕಿಂತ ಹೆಚ್ಚಿನ ಪುಟಗಳು ಡಿಜಿಟಲೀಕರಣಗೊಳ್ಳುವುದು ಬಾಕಿ ಇದ್ದು ಸದ್ಯದಲ್ಲೇ ಆ ಕಾರ್ಯವು ಪೂರ್ಣಗೊಳ್ಳಲಿದೆ ಎಂದರು.
ನಾಡಕಚೇರಿಯಲ್ಲಿ ಡಿಜಿಟಲ್ ಭೂ ದಾಖಲೆಗಳನ್ನು ವಿತರಿಸುವಾಗ ಸ್ವೀಕರಿಸುವ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಲು ಕೆ 2 ಚಲನ್ ಅನ್ನು ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಜನರೇಟ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮಾಯಕೊಂಡವು ದಾವಣಗೆರೆ ತಾಲೂಕು ಕೇಂದ್ರದಿಂದ 32 ಕಿಮೀ ದೂರದಲ್ಲಿರುವ ಹೋಬಳಿ ಕೇಂದ್ರ, ಜತೆಗೆ ತಾಲೂಕಿನಲ್ಲಿ ದೊಡ್ಡ ಹೋಬಳಿಯಾಗಿದ್ದು 65 ಕ್ಕಿಂತ ಹೆಚ್ಚು ಹಳ್ಳಿಗಳನ್ನು ಹೊಂದಿದೆ. ಆದ್ದರಿಂದ ಮಾಯಕೊಂಡದಲ್ಲಿ ಡಿಜಿಟಲ್ ಭೂ ದಾಖಲಾತಿ ವಿತರಣಾ ಕೇಂದ್ರ ಪ್ರಾರಂಭಿಸಲು ಇಲಾಖೆ ಆದೇಶ ನೀಡಿದೆ ಎಂದರು.
ಈ ವೇಳೆ ರೈತನಿಗೆ ಡಿಜಿಟಲ್ ಭೂ ದಾಖಲೆ (ಹಳೆಯ ಪಹಣಿ) ವಿತರಣೆ ಮಾಡಿದರು.