

ಮಧುಗಿರಿ: ಚಲಿಸುತ್ತಿದ್ದ ಬೈಕ್ನಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಸವಾರನನ್ನು ತಹಸೀಲ್ದಾರ್ ಡಾ.ಜಿ. ವಿಶ್ವನಾಥ್ ಅವರು ಉಪಚರಿಸಿ ಮಾನವೀಯತೆ ಮೆರೆದಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮಕ್ಕೆ ಕಾರ್ಯ ನಿಮಿತ್ತ ಕಾರಿನಲ್ಲಿ ತಹಸೀಲ್ದಾರ್ ಹೋಗುತ್ತಿದ್ದರು. ಮಾರ್ಗಮಧ್ಯೆ ಅಂದರೆ ಮರಬಹಳ್ಳಿ-ಕೋಡಗದಾಲ ಗ್ರಾಮಗಳ ಮಧ್ಯೆ ಹಾದುಹೋಗಿರುವ ಗೌರಿಬಿದನೂರು ರಸ್ತೆಯಲ್ಲಿ ಬೈಕ್ ಸವಾರ ಕೆಳಗೆ ಬಿದ್ದು ಒದ್ದಾಡುತ್ತಿದ್ದ.
ಕೂಡಲೇ ಕಾರಿನಿಂದ ಇಳಿದ ತಹಸೀಲ್ದಾರ್ ವಿಶ್ವನಾಥ್, ರಸ್ತೆಯಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನವನ್ನು ಮೇಲಕ್ಕೆತ್ತಿ ವಾಹನ ಸವಾರ ಯೋಗಕ್ಷೇಮ ವಿಚಾರಿಸಿದರು. ಸವಾರನ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ಸಣ್ಣ ಪುಟ್ಟ ಗಾಯಾಗಳಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು.
ಸರಳ ಸಜ್ಜನಿಕೆಯ ಸರ್ಕಾರಿ ಅಧಿಕಾರಿಯಾಗಿರುವ ತಹಸೀಲ್ದಾರ್ ವಿಶ್ವನಾಥ್, ಬಡ ಕುಟುಂಬದಿಂದ ಬಂದವರಾಗಿದ್ದು, ಸರ್ಕಾರಿ ಸೇವೆಗೂ ಮೊದಲು ತಮ್ಮ ಪದವಿಪೂರ್ವ ವಿದ್ಯಾಭ್ಯಾಸದ ಸಮಯದಲ್ಲಿ ಪತ್ರಿಕೆ ವಿತರಕರಾಗಿ ಕೆಲಸ ಮಾಡಿದ್ದರು. ತಾಲೂಕಿನಲ್ಲಿ ಅನೇಕ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಇವರು ಜನಸ್ನೇಹಿ ಅಧಿಕಾರಿಯಾಗಿದ್ದಾರೆ.