ಮಧುರೆ ಉಪತಹಸೀಲ್ದಾರ್ ಕಚೇರಿ ನಾಮಕೇವಾಸ್ತೆ

office
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯಲ್ಲಿ ಕಾರ್ಯಾರಂಭವಾಗದ ಉಪತಹಸೀಲ್ದಾರ್ ನೂತನ ಕಚೇರಿ
Published on

ಹಳೇ ಕಚೇರಿಯಲ್ಲಿ ಅಧಿಕಾರಿಗಳ ವಾಸ್ತವ್ಯ

ಕಿಡಿಗೇಡಿಗಳ ತಾಣವಾಗುತ್ತಿದೆ ಸರ್ಕಾರಿ ಕಟ್ಟಡ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಮಧುರೆ
ದೊಡ್ಡಬಳ್ಳಾಪುರ ತಾಲೂಕು ಮಧುರೆ ಹೋಬಳಿಯಲ್ಲಿನ ಉಪತಹಸೀಲ್ದಾರ್ ನೂತನ ಕಚೇರಿ ಕಾರ್ಯಾರಂಭ ಮಾಡುವ ಲಕ್ಷಣ ಕಂಡುಬರುತ್ತಿಲ್ಲ. ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಾಣವಾದ ಸರ್ಕಾರಿ ಕಟ್ಟಡ ನಾಮಕೇವಾಸ್ತೆಯಂತಾಗಿದ್ದು ಸಾರ್ವಜನಿಕರ ಬಳಕೆಗಿಲ್ಲದಂತಾಗಿದೆ.
ಸುಮಾರು 2 ವರ್ಷದ ಹಿಂದೆ ಗುದ್ದಲಿಪೂಜೆಯಾಗಿ 1 ವರ್ಷದ ಹಿಂದೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಇದುವರೆಗೆ ಕಚೇರಿ ಕಾರ್ಯಾರಂಭಕ್ಕೆ ಶುಭಕಾಲ ಕೂಡಿಬಂದತ್ತಿಲ್ಲ. ಇಂದು ನಾಳೆ ಎಂದು ಸಬೂಬು ಹೇಳಿಕೊಂಡು ಬರುತ್ತಿರುವ ತಹಸೀಲ್ದಾರ್ ಕಚೇರಿ ಅಧಿಕಾರಿಗಳಿಗೂ ನೂತನ ಕಟ್ಟಡ ಯಾವಾಗಿನಿಂದ ಕಾರ್ಯಾರಂಭ ಮಾಡಲಿದೆ ಎಂಬ ಸ್ಪಷ್ಟತೆಯಿಲ್ಲ. ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಾಣವಾದ ಈ ಕಟ್ಟಡದಲ್ಲಿ ಉಪತಹಸೀಲ್ದಾರ್ ಕಚೇರಿ ಕಾರ್ಯಾರಂಭವಾಗದಿರಲು ಕಾರಣವೇನು ಎಂಬುದು ಸ್ಥಳೀಯರ ಪಾಲಿಗೆ ರಹಸ್ಯವಾಗಿಯೇ ಉಳಿದಿದೆ.
ನೀರು ಇಲ್ಲಂತೆ: ಬಣ್ಣಸುಣ್ಣ ಬಳಿದುಕೊಂಡು ಸಿದ್ದವಾಗಿರುವ ನೂತನ ಕಟ್ಟಡಕ್ಕೆ ಕುಡಿವ ನೀರಿನ ಸಂಪರ್ಕವೇ ಇಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಕಚೇರಿ ಪಕ್ಕದಲ್ಲೇ ಶೌಚಗೃಹ ನಿರ್ಮಾಣ ಮಾಡಿ ವಾಟರ್ ಟ್ಯಾಂಕ್‌ನ್ನು ನಿರ್ಮಾಣ ಮಾಡಲಾಗಿದೆ ಆದರೆ ಕಟ್ಟಡಕ್ಕೆ ಬೇಕಾದ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ನೂತನ ಕಟ್ಟಡಕ್ಕೆ ನೀರಿನ ಸಂಪರ್ಕ ಕಲ್ಪಿಸಲು ಮೀನಮೇಷವೇಕೆ ಎಂಬುದೂ ಸಹ ಸ್ಥಳೀಯರ ಪಾಲಿಗೆ ರಹಸ್ಯವಾಗಿಯೇ ಉಳಿದಿದೆ.
ಉದ್ಘಾಟನೆ ಗೊಂದಲ: ಮಾ.2023ರಲ್ಲಿ ಕಟ್ಟಡ ಉದ್ಘಾಟನೆಯ ನಾಮಲಕ ಅಳವಡಿಸಲಾಗಿದೆ. ಅಂದು ದೊಡ್ಡಬಳ್ಳಾಪುರ ಶಾಸಕರಾಗಿದ್ದ ವೆಂಕಟರಮಣಯ್ಯ ಕಚೇರಿ ಉದ್ಘಾಟಿಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಕಡೆ ಆ ವೇಳೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಬಳಿಕ ಪ್ರಸ್ತುತ ಶಾಸಕರಾಗಿರುವ ಧೀರಜ್‌ಮುನಿರಾಜು ಕಟ್ಟಡ ಉದ್ಘಾಟನೆ ಮಾಡಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು ಕಟ್ಟಡದ ಉದ್ಘಾಟನೆ ಕಾರ್ಯಕ್ರಮವೇ ಆಯೋಜನೆಯಾಗಿಲ್ಲ ಎನ್ನುತ್ತಾರೆ. ಆದ್ದರಿಂದ ನೂತನ ಕಟ್ಟಡದ ಉದ್ಘಾಟನೆ ಹಾಗೂ ಕಾರ್ಯಾರಂಭಕ್ಕೆ ಹಿಡಿದಿರುವ ಗ್ರಹಣವಾದರೂ ಯಾವುದು ಎಂಬುದು ಸ್ಥಳೀಯರ ಕಾಡುತ್ತಿರುವ ಯಕ್ಷಪ್ರಶ್ನೆಯಾಗಿದೆ.
.

ನೂತನ ಕಟ್ಟಡ ಕಾರ್ಯಾರಂಭ ಮಾಡಲು ಕಟ್ಟಡಕ್ಕೆ ನೀರು ಹಾಗೂ ವಿದ್ಯುತ್ ಸಂಪರ್ಕದ ಕೊರತೆ ಇದೆ. ಈ ಬಗ್ಗೆ ನನ್ನ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕಟ್ಟಡಕ್ಕೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಇದರ ಸಂಬಂಧ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದ್ದು, ಇನ್ನೇನು ಕೆಲಸ ಆರಂಭವಾಗಲಿದ್ದು ಶೀಘ್ರದಲ್ಲೇ ಕಟ್ಟಡ ಕಾರ್ಯಾರಂಭವಾಗಲಿದೆ.

ಧೀರಜ್ ಮುನಿರಾಜು, ಶಾಸಕ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net