ಅಳ್ನಾವರ-ಧಾರವಾಡ ಪ್ರಮುಖ ರಸ್ತೆಯಲ್ಲೇ ತಗ್ಗು-ಗುಂಡಿ

ALN TEGGU GUNDI
Published on

ಅಳ್ನಾವರ: ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ತಗ್ಗು -ಗುಂಡಿಗಳು ಬಿದ್ದು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಚಾಲಕರು ವಾಹನ ಚಲಾಯಿಸಲು ಪರದಾಡುವಂತಾಗಿದೆ.

ಪಟ್ಟಣದಿಂದ ಹಳಿಯಾಳ, ಧಾರವಾಡ ಹಾಗೂ ಗೋವಾ ರಾಜ್ಯ ಮಾರ್ಗದ 5 ಕಿಮೀ ರಸ್ತೆಯ ಅಕ್ಕ-ಪಕ್ಕದಲ್ಲಿ ದಶಕಗಳಿಂದ ಇರುವ ಕಾಲುವೆಗಳು ಮುಚ್ಚಿ ಹೋಗಿವೆ. ಇದರಿಂದಾಗಿ ಮಳೆ ನೀರು ಹರಿದು ಹೋಗಲು ಸಾಧ್ಯವಾಗದೇ ರಸ್ತೆ ಮೇಲೆ ನೀರು ಹರಿಯುತ್ತಿದೆ. ಕಾಳಿ ನದಿ ಯೋಜನೆಯ ಪೈಪ್​ಲೆನ್ ಕಾಮಗಾರಿಯಿಂದಾಗಿ ಅಲ್ಲಲ್ಲಿ ಮುಚ್ಚಲಾಗಿರುವ ತಗ್ಗುಗಳಲ್ಲಿ ನೀರು ಸಂಗ್ರಹಗೊಳ್ಳುತ್ತಿದೆ. 2020ರಲ್ಲಿ 50 ಲಕ್ಷ ರೂ.ಗಳ ಅನುದಾನದಲ್ಲಿ ಈ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ 6 ಕಿಮೀ ರಸ್ತೆಯುದ್ದಕ್ಕೂ ಬೀಳುತ್ತಿರುವ ತಗ್ಗು-ಗುಂಡಿಗಳನ್ನು ದುರಸ್ತಿಗೊಳಿಸಲು 20 ಲಕ್ಷ ರೂ.ಗಳು ವೆಚ್ಚವಾಗುತ್ತಿದೆ. ಪ್ರತಿ ಮಳೆಗಾಲದಲ್ಲೂ ಅನುಭವಿಸಬೇಕಾದ ತಗ್ಗು-ಗುಂಡಿಗಳ ಕಿರಿಕಿರಿ ತಪ್ಪಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಶ್ವತವಾದ ಗುಣಮಟ್ಟದ ರಸ್ತೆ ನಿರ್ವಿುಸುವತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net