

ಹೊಸಪೇಟೆ: ಸುವರ್ಣ ನಾರಿ ತಳಿಯ 18 ತಿಂಗಳ ಟಗರು ವಿತರಿಸುವುದಾಗಿ 5 ಸಾವಿರ ರೂ. ಕಟ್ಟಿಸಿಕೊಂಡು ಐದಾರು ತಿಂಗಳಿನ ಮರಿ ವಿತರಿಸಲು ಮುಂದಾದ ಪಶು ಇಲಾಖೆ ಅಧಿಕಾರಿಗಳ ವಿರುದ್ಧ ಕುರಿಗಾಹಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪಶುವೈದ್ಯಕೀಯ ಕಚೇರಿಯಲ್ಲಿ ಟಗರು ವಿತರಿಸಲಾಗುತ್ತದೆಂದು ತಿಳಿಸಿದ್ದರಿಂದ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕುರಿ ಮತ್ತು ಉಣ್ಣೆ ಸಹಕಾರಿ ಸಂಘದ ಸದಸ್ಯರು ಹಾಗೂ ಕುರಿಗಾಹಿಗಳು ಗುರುವಾರ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
18 ತಿಂಗಳ ಟಗರು ನೀಡುವುದಾಗಿ ಒಂದು ವರ್ಷದ ಹಿಂದೆಯೇ 5 ಸಾವಿರ ರೂ. ಕಟ್ಟಿಸಿಕೊಂಡಿದ್ದೀರಿ. ಜತೆಗೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ 15 ಸಾವಿರ ರೂ. ಸಬ್ಸಿಡಿ ಸಹ ಬಿಡುಗಡೆಯಾಗಿದೆ. ಒಟ್ಟು 20 ಸಾವಿರ ರೂ. ಬೆಲೆ ಬಾಳುವ ಟಗರು ನೀಡುವ ಬದಲು ಮರಿಗಳನ್ನು ನೀಡುತ್ತಿದ್ದೀರಿ?. ಈ ಮರಿಗಳನ್ನು ತೆಗೆದುಕೊಂಡು ಹೋಗಿ ಏನು ಮಾಡಬೇಕು ಎಂದು ಕುರಿಗಾಹಿಗಳು ಕಿಡಿಕಾರಿದರು. ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಷೇರುದಾರರಾದ ಕೊಟ್ಟೂರಿನ ಮೂಗಪ್ಪ, ರಾಜಪ್ಪ, ಕೊಟ್ರೇಶ್ ಸೇರಿದಂತೆ 30ಕ್ಕೂ ಹೆಚ್ಚು ಫಲಾನುಭವಿಗಳು ಇದ್ದರು.