ಜ್ಞಾನವೃದ್ಧಿಗೆ ತಂತ್ರಜ್ಞಾನ ಬಳಸಿ ; ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಸಲಹೆ

26TMK_swada_DC
Published on

ತುಮಕೂರು: ಕರೊನಾ ಹಿನ್ನೆಲೆಯಲ್ಲಿ ಬಹುತೇಕ ತರಗತಿಗಳು ಆನ್‌ಲೈನ್ ಮೂಲಕವೇ ನಡೆಯುತ್ತಿದ್ದು, ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆಲವು ದಾನಿಗಳು ನೆರವಾಗುತ್ತಿರುವುದು ಪ್ರಶಂಸನೀಯ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಕಚೇರಿಯಲ್ಲಿ ಬುಧವಾರ ಸ್ವಾದ ಫೌಂಡೇಷನ್ ಮತ್ತು ದೀಕ್ಷಾ ಸಂಸ್ಥೆ ಸಹಯೋಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದರು. ಗ್ರಾಮೀಣ ಹಾಗೂ ನಗರ ಪ್ರದೇಶದ ಮಕ್ಕಳ ನಡುವಿನ ತಂತ್ರಜ್ಞಾನದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರ ಡಿಜಿಟಲ್ ಇಂಡಿಯಾದಂತಹ ಕಾರ್ಯಕ್ರಮ ರೂಪಿಸಿದ್ದು, ಆನ್‌ಲೈನ್ ಕೋಚಿಂಗ್ ಸೇರಿ ಎಲ್ಲರಿಗೂ ಮಾಹಿತಿ ಮುಕ್ತವಾಗಿ ದೊರಕುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಮಕ್ಕಳು ಟ್ಯಾಬ್ಲೆಟ್ ಅನ್ನು ಮನರಂಜನೆಗೆ ಬಳಸದೇ ಜ್ಞಾನವನ್ನು ವೃದ್ಧಿಸಿಕೊಳ್ಳಲು ಬಳಸಬೇಕು ಎಂದರು.

ಕರೊನಾ ಮಕ್ಕಳಿಗೆ ಶಿಕ್ಷಣ ನಿಲ್ಲಬಾರದು ಎನ್ನುವ ಉದ್ದೇಶದಿಂದ ತಂತ್ರಜ್ಞಾನದ ಬಳಕೆ ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯನ್ನು ಗಮನಿಸಿ ಸ್ವಾದ ಫೌಂಡೇಷನ್ ಮತ್ತು ದೀಕ್ಷಾ ಸಂಸ್ಥೆ ಸಹಯೋಗದಲ್ಲಿ ಮಕ್ಕಳಿಗೆ ಕೆರಿಯರ್ ಡೆವಲ್‌ಮೆಂಟ್ ಕಾರ್ಯಕ್ರಮ ಹಮ್ಮಿಕೊಂಡಿದೆ, ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಶಿಕ್ಷಣ ಅವಶ್ಯಕವಾಗಿದೆ, ಸಾಂಕ್ರಾಮಿಕ ಕೋವಿಡ್ ನಡುವೆಯೂ ಮಕ್ಕಳಿಗೆ ಶಿಕ್ಷಣ ಅವಶ್ಯಕವಾಗಿದೆ ಎಂದರು.

ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಫೌಂಡೇಷನ್ ಶ್ರಮಿಸುತ್ತಿದ್ದು, ಸ್ವಾದ ಫೌಂಡೇಷನ್‌ನ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪದವಿ ಶಿಕ್ಷಣವನ್ನು ಉಚಿತವಾಗಿ ನೀಡುವ ಮೂಲಕ ಅವರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ನಾಗಣ್ಣ, ದೀಕ್ಷಾ ಸಂಸ್ಥೆ ರವಿಕುಮಾರ್, ಸ್ವಾದ ಫೌಂಡೇಷನ್‌ನ ಟ್ರಸ್ಟಿ ರಾಜೇಶ್ ಮಾಂಡ್ಯಂ, ಪ್ರಿಯಮಾಂಡ್ಯಂ, ರಾಮ್‌ನಾರಾಯಣ್ ಮತ್ತಿತರರು ಇದ್ದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಅವರಿಗೆ ಉತ್ತಮ ಅವಕಾಶ ಕಲ್ಪಿಸುವುದು ಸ್ವಾದ ಫೌಂಡೇಷನ್ ಉದ್ದೇಶವಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವುದಕ್ಕಾಗಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ 210 ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾಗಿರುವ ಟ್ಯಾಬ್ಲೆಟ್‌ಗಳನ್ನು ಉಚಿತವಾಗಿ ನೀಡಲಾಗಿದ್ದು, ಜಿಲ್ಲೆಯ ಅರ್ಹ 30 ವಿದ್ಯಾರ್ಥಿಗಳಿಗೂ ನೆರವಾಗಿದೆ. ಎಚ್.ಜಿ.ಚಂದ್ರಶೇಖರ್ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net