

ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ಹಾಗೂ ಲೆನೊವೊ ಕಂಪನಿ ಸಹಭಾಗಿತ್ವದಲ್ಲಿ ಹುಬ್ಬಳ್ಳಿ ಶಹರ ಬಿಇಒ ಕಚೇರಿಯಲ್ಲಿ ನಗರದ ವಿವಿಧ ಸರ್ಕಾರಿ ಶಾಲೆಯ ಆಯ್ದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಟ್ಯಾಬ್ ವಿತರಿಸಲಾಯಿತು.
ಶಹರ ಬಿಇಒ ಶ್ರೀಶೈಲ ಕರಿಕಟ್ಟಿ ಟ್ಯಾಬ್ ವಿತರಿಸಿ ಮಾತನಾಡಿ, ಅಗಸ್ತ್ಯ ಪ್ರತಿಷ್ಠಾನವು ವಿಜ್ಞಾನ ಪ್ರಯೋಗ, ಆನ್ಲೈನ್ ತರಗತಿ ನಡೆಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಿದೆ. ಈಗ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಟ್ಯಾಬ್ ನೀಡಿರುವುದು ಸಂತಸ ತರಿಸಿದೆ ಎಂದರು.
ಪ್ರತಿಷ್ಠಾನದ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ ಮಾತನಾಡಿ, ಲೆನೊವೊ ಮತ್ತು ಮೊಟೊರೊಲಾ ಕಂಪನಿಯಿಂದ ಉತ್ತರ ಕರ್ನಾಟಕ ವಿಭಾಗಕ್ಕೆ 25 ಟ್ಯಾಬ್ ಬಂದಿದ್ದು, ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸಲಾಗಿದೆ. ‘ಲ್ಯಾಬ್ ಇನ್ ಎ ಟ್ಯಾಬ್’ ಎಂಬ ಆಪ್ ಅಳವಡಿಸಿದ್ದು, 6ರಿಂದ 10ನೇ ತರಗತಿ ಪಠ್ಯಪುಸ್ತಕದಲ್ಲಿರುವ ವಿಜ್ಞಾನ ಪ್ರಯೋಗಗಳ ವಿಡಿಯೋಗಳನ್ನು ಹಾಕಲಾಗಿದೆ. ವಿದ್ಯಾರ್ಥಿನಿಯರು ತಮ್ಮ ಸಹಪಾಠಿಗಳು ಮತ್ತು ನೆರೆಹೊರೆಯ ವಿದ್ಯಾರ್ಥಿಗಳಿಗೆ ಈ ಟ್ಯಾಬ್ ಮೂಲಕ ವಿಜ್ಞಾನ ಪ್ರಯೋಗಗಳನ್ನು ತೋರಿಸಬಹುದು ಎಂದರು.
ಶಿಕ್ಷಣ ಸಂಯೋಜಕರಾದ ಲೋಕೇಶ, ಪ್ರಭಾಕರ, ಶಿಕ್ಷಕಿ ವಾಣಿ ಪತಂಗೆ, ಪ್ರತಿಷ್ಠಾನದ ರಮೇಶ ಅಣ್ಣಿಗೇರಿ, ಮಾಲತೇಶ ಎನ್., ದ್ಯಾಮಣ್ಣ, ಇತರರಿದ್ದರು.