ತಿ.ನರಸೀಪುರದಲ್ಲಿ ಏರಿದ ಚುನಾವಣಾ ಕಾವು!

h.c.mahadevappa
Published on


ಅವಿನಾಶ್ ಜೈನಹಳ್ಳಿ

ಮೈಸೂರು: ಜಿಲ್ಲೆಯ ತಿ.ನರಸೀಪುರ ಕ್ಷೇತ್ರದಲ್ಲಿ ವರ್ಷಕ್ಕೂ ಮುನ್ನವೇ ವಿಧಾನಸಭೆ ಚುನಾವಣೆಯ ಕಾವು ಏರತೊಡಗಿದ್ದು, ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ತಿರುಗಾಟ ಜೋರಾಗಿದೆ.
ವಿಶೇಷವಾಗಿ ಈ ಬಾರಿ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬ ಕುತೂಹಲ ಕಾಡುತ್ತಿದೆ. ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್‌ಬೋಸ್‌ಗೆ ಈ ಬಾರಿಯಾದರೂ ಟಿಕೆಟ್ ಸಿಗಲಿದೆಯೇ ಎಂಬ ಚರ್ಚೆ ಜೋರಾಗಿದ್ದು, ಈ ಮಧ್ಯೆ ಎಲ್ಲ ಪಕ್ಷದ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಮತಬೇಟೆ ಆರಂಭಿಸಿದ್ದಾರೆ.


2023ರ ಚುನಾವಣೆಗೆ ಜೆಡಿಎಸ್‌ನಿಂದ ಶಾಸಕ ಎಂ.ಅಶ್ವಿನ್‌ಕುಮಾರ್ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಹಾಗಾಗಿ, ಕ್ಷೇತ್ರದಲ್ಲಿ ಶಾಸಕರ ತಿರುಗಾಟ ಜೋರಾಗಿದ್ದು, ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅದರಲ್ಲೂ ಒಂದು ವರ್ಷದಿಂದ ಕ್ಷೇತ್ರದಲ್ಲಿ ಬಿರುಸಿನ ಓಡಾಟ, ಕಾರ್ಯಕರ್ತರ ಸಭೆ ನಡೆಸುತ್ತಾ, ಸಂಘಟನೆಯಲ್ಲಿ ನಿರತರಾಗಿದ್ದಾರೆ. ಪ್ರತಿ ಸೋಮವಾರ ತಾಲೂಕು ಕಚೇರಿಯಲ್ಲಿ ಜನಸಂಪರ್ಕ ಸಭೆ ನಡೆಸುತ್ತಿದ್ದಾರೆ. ಚುನಾವಣೆಗೆ ಸಕಲ ರೀತಿಯಲ್ಲೂ ತಯಾರಾಗುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಭಾರತೀಶಂಕರ್, ಸಿ.ರಮೇಶ್ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದಾರೆ.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಐದು ವರ್ಷದ ಹಿಂದೆಯೇ ಮಕ್ಕಳನ್ನು ರಾಜಕೀಯಕ್ಕೆ ಕರೆತರಬೇಕು ಎನ್ನುವ ಪ್ರಯತ್ನದಲ್ಲಿದ್ದರು. ಅದರಲ್ಲಿ ಸಿದ್ದರಾಮಯ್ಯ ಯಶಸ್ವಿಯಾದರು. ಅದರಂತೆ, ಅವರ ಪುತ್ರ ಡಾ.ಯತೀಂದ್ರ ಅವರಿಗೆ 2018ರ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಟಿಕೆಟ್ ಕೊಡಿಸಿ ಎಂಎಲ್‌ಎ ಮಾಡಿದರು. ಆದರೆ 2018ರಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್‌ಬೋಸ್‌ಗೆ ಹಿನ್ನಡೆಯಾಗಿತ್ತು. ಈ ಬಾರಿಯೂ ಕಾಂಗ್ರೆಸ್‌ನಿಂದ ಅನೇಕ ಜನ ಟಿಕೆಟ್ ಆಕಾಂಕ್ಷಿಗಳಿದ್ದರೂ ಸುನೀಲ್‌ಬೋಸ್ ಮುನ್ನೆಲೆಯಲ್ಲಿದ್ದಾರೆ.
1952ರಿಂದ ಇಲ್ಲಿಯವರೆಗೆ 15 ಚುನಾವಣೆಗಳನ್ನು ಕಂಡಿರುವ ತಿ.ನರಸೀಪುರ ಕ್ಷೇತ್ರದಲ್ಲಿ ಪ್ರತಿ ಬಾರಿ ಜನತಾ ಪರಿವಾರ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿದೆ. ತಲಾ ಒಂದು ಬಾರಿ ಕೆಎಂಪಿಪಿ, ಬಿಜೆಪಿ ಮತ್ತು ಎನ್‌ಸಿಒ ಪಕ್ಷ ಗೆಲುವು ಸಾಧಿಸಿವೆ. ಒಟ್ಟು 7 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಉಳಿದ 5 ಚುನಾವಣೆಗಳಲ್ಲಿ ಜನತಾ ಪರಿವಾರ ಮೇಲುಗೈ ಸಾಧಿಸಿದೆ.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ 2013ರಲ್ಲಿ ಅತ್ಯಂತ ಪ್ರಯಾಸದಿಂದ (323 ಮತ) ಗೆಲುವು ಸಾಧಿಸಿದ್ದರು. ತಿ.ನರಸೀಪುರ ಕ್ಷೇತ್ರದಲ್ಲಿ ಐದು ಬಾರಿ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದರೂ 2018ರಲ್ಲಿ ಸೋಲು ಕಂಡರು.

ಕ್ಷೇತ್ರ ತ್ಯಾಗಕ್ಕೆ ಸಿದ್ಧರಾದ ಎಚ್‌ಸಿಎಂ!
ಮಗನ ರಾಜಕೀಯ ಭವಿಷ್ಯಕ್ಕಾಗಿ ಎಚ್.ಸಿ.ಮಹದೇವಪ್ಪ ಈ ಬಾರಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. 2017ರಲ್ಲಿ ವಿ.ಶ್ರೀನಿವಾಸಪ್ರಸಾದ್ ಅವರ ರಾಜೀನಾಮೆಯಿಂದ ತೆರವಾಗಿದ್ದ ನಂಜನಗೂಡು ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸಲು ಮಹದೇವಪ್ಪ ಬಯಸಿದ್ದರು. ಆದರೆ ಸಿದ್ದರಾಮಯ್ಯ ಮತ್ತು ಆರ್.ಧ್ರುವನಾರಾಯಣ್ ಮಧ್ಯಪ್ರವೇಶ ಮಾಡಿ ಜೆಡಿಎಸ್‌ನಲ್ಲಿದ್ದ ಕಳಲೆ ಕೇಶವಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಟಿಕೆಟ್ ಕೊಡಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.


ಬಳಿಕ 2018ರಲ್ಲೂ ಸಿದ್ದರಾಮಯ್ಯ ಮಾದರಿಯಲ್ಲೇ ಎಚ್.ಸಿ.ಮಹದೇವಪ್ಪ ಕೂಡ ತಮ್ಮ ಪುತ್ರ ಸುನೀಲ್‌ಬೋಸ್ ಅವರನ್ನು ರಾಜಕೀಯಕ್ಕೆ ತರಲು ನಾನಾ ಪ್ರಯತ್ನ ನಡೆಸಿದ್ದರು. ಪುತ್ರ ಯಾವುದೇ ತೊಂದರೆ ಇಲ್ಲದೆ ಗೆಲುವು ಪಡೆದು ಉಜ್ವಲ ರಾಜಕೀಯ ಭವಿಷ್ಯ ಪಡೆಯಬೇಕು ಎಂಬ ಉದ್ದೇಶದಿಂದ ಕ್ಷೇತ್ರ ತ್ಯಾಗಕ್ಕೂ ಮುಂದಾಗಿದ್ದರು. ತಿ.ನರಸೀಪುರ ಕ್ಷೇತ್ರವನ್ನು ಸುನೀಲ್‌ಬೋಸ್‌ಗೆ ಬಿಟ್ಟುಕೊಟ್ಟು ನಂಜನಗೂಡು ಕ್ಷೇತ್ರದ ಕಡೆ ಪ್ರಯಾಣಿಸಲು ಮುಂದಾಗಿದ್ದರು. ಆದರೆ, ಅಂದಿನ ಕೆಲ ರಾಜಕೀಯ ಬದಲಾವಣೆಗಳಿಂದ ಅದು ಸಾಧ್ಯವಾಗಲಿಲ್ಲ. ಕಡೆಗೆ ತಾವೇ ತಿ.ನರಸೀಪುರದಿಂದ ಸ್ಪರ್ಧಿಸಿದ್ದರು. ಈಗ ಮತ್ತೆ 2023ರ ಚುನಾವಣೆಯಲ್ಲಿ ಮಹದೇವಪ್ಪ ತಿ.ನರಸೀಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ತಾವು ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಒಳಗೊಳಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಚರ್ಚೆ ಜೋರಾಗಿದೆ.

ಅಂತೆಯೆ, ತಿ.ನರಸೀಪುರ ಕ್ಷೇತ್ರದಲ್ಲಿ 13 ವರ್ಷಗಳಿಂದಲೂ ಸುನೀಲ್‌ಬೋಸ್ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿ, ಕಾರ್ಯಕರ್ತರ ಜತೆ ಬೆರೆತು, ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಇನ್ನು ಮಹದೇವಪ್ಪ ಕೂಡ ನಂಜನಗೂಡು ಕ್ಷೇತ್ರ ವ್ಯಾಪ್ತಿಯ ಬೆಂಬಲಿಗರನ್ನು ಕರೆದು ಈಗಾಗಲೇ ಅನೇಕ ಸಭೆಗಳನ್ನು ನಡೆಸಿದ್ದಾರೆ. ಸುನೀಲ್‌ಬೋಸ್ ಕ್ಷೇತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿದ್ದಾರೆ. ಕಾರ್ಯಕರ್ತರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಈಗಾಗಲೇ ಮತಬೇಟೆ ಆರಂಭಿಸಿರುವ ಅವರು, ಪ್ರತಿದಿನ ಕ್ಷೇತ್ರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಂದು ಸಾವು, ನೋವುಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಈ ಬಾರಿಯಾದರೂ ಅವರಿಗೆ ಟಿಕೆಟ್ ಸಿಗಲಿದೆಯೇ ಎಂಬ ಕುತೂಹಲ ಇದೆ.

ಧ್ರುವನಾರಾಯಣ್, ಪುಷ್ಪಾ ಅಮರ್‌ನಾಥ್ ಕೂಡ ಆಕಾಂಕ್ಷಿ!:
ಎಚ್.ಸಿ.ಮಹದೇವಪ್ಪ ಹಾಗೂ ಸುನೀಲ್ ಬೋಸ್ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ್ಪಾ ಅಮರ್‌ನಾಥ್ ಕೂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.


ಲೋಕಸಭಾ ಚುನಾವಣೆಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ವಿರುದ್ಧ ಸೋಲು ಕಂಡ ಬಳಿಕ ಆರ್.ಧ್ರುವನಾರಾಯಣ್ ರಾಜ್ಯ ರಾಜಕಾರಣದ ಕಡೆ ಮುಖ ಮಾಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಈ ಮಧ್ಯೆ ಕೊಳ್ಳೇಗಾಲ ಅಥವಾ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದರು. ಕೊಳ್ಳೇಗಾಲದಿಂದ ಜಯಣ್ಣ, ಎ.ಆರ್.ಕೃಷ್ಣಮೂರ್ತಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹಾಗಾಗಿ, ಎರಡು ವರ್ಷಗಳಿಂದ ನಂಜನಗೂಡು ಕ್ಷೇತ್ರದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದರು.


ಈ ಮಧ್ಯೆ ಮಹದೇವಪ್ಪ ತಿ.ನರಸೀಪುರ ಕ್ಷೇತ್ರವನ್ನು ಸುನೀಲ್ ಬೋಸ್‌ಗೆ ಬಿಟ್ಟುಕೊಟ್ಟು ನಂಜನಗೂಡು ಕ್ಷೇತ್ರದ ಕಡೆ ಪ್ರಯಾಣಿಸಲು ಮತ್ತೆ ಪ್ರಯತ್ನಿಸುತ್ತಿರುವುದು ಧ್ರುವನಾರಾಯಣ್ ಅವರಿಗೆ ಬೇಸರ ತರಿಸಿದೆ. ಹಾಗಾಗಿ, ಅವರು ನಂಜನಗೂಡಿನ ಜತೆಗೆ ತಿ.ನರಸೀಪುರದ ಮೇಲೂ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಿ.ನರಸೀಪುರ ಕ್ಷೇತ್ರದ ತಮ್ಮ ಬೆಂಬಲಿಗರ ಜತೆ ಸಭೆ ನಡೆಸಿದ್ದಾರೆ. ಕ್ಷೇತ್ರದ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯೂ ಆದ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್ ಕೂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಕಾಯುತ್ತಿದ್ದು, ಪಕ್ಷದ ರಾಜ್ಯ ಮತ್ತು ರಾಷ್ಟ್ರ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net