ಆಪತ್ತು ಬಂದಿರುವುದು ಧರ್ಮಕ್ಕೆ ಅಲ್ಲ, ಸಂವಿಧಾನಕ್ಕೆ

mysore
Published on

ಮೈಸೂರು: ಧರ್ಮಕ್ಕೆ ಆಪತ್ತು ಬಂದಿದೆ ಎಂದು ಹುಯಿಲೆಬ್ಬಿಸಲಾಗುತ್ತಿರುವುದು ಸುಳ್ಳು. ಬದಲಿಗೆ ದೇಶದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ವಿಪತ್ತು ಎದುರಾಗಿದೆ ಎಂದು ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.


ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಚಾರ್ವಾಕ ಸಂಸ್ಥೆಯ ವೈಚಾರಿಕ ಸಮ್ಮೇಳನದಲ್ಲಿ ಅವರು ಮಾತನಾಡಿ, ದೇಶದಲ್ಲಿ ಧರ್ಮದ ಅಫೀಮು ಬಿತ್ತಲಾಗುತ್ತಿದೆ. ಈ ಮೂಲಕ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಸಂವಿಧಾನ ಮತ್ತು ಮನುಸ್ಮತಿಯ ನಡುವೆ ಸಂಘರ್ಷ ತೀವ್ರವಾಗಿದೆ. ದೇಶದಲ್ಲಿರುವ ಶೇ.2ರಷ್ಟ ಜನರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಇದು ಸಂವಿಧಾನದಲ್ಲಿ ಅವಕಾಶ ಇದೆಯೇ? ಮನವಿ, ಹೋರಾಟ, ಆಯೋಗ ರಚನೆ, ಚರ್ಚೆ, ಸಂವಾದವಿಲ್ಲದೆ ಹೇಗೆ ಮೀಸಲಾತಿ ಕೊಡಲಾಯಿತು ಎಂದು ಕಿಡಿಕಾರಿದರು.


ಮತದಾರ ಪ್ರಭು ಭ್ರಷ್ಟರಾದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಹ ಭ್ರಷ್ಟವಾಗದೆ ಇರಲು ಸಾಧ್ಯವೇ? 200 ವರ್ಷ ಹಿಂದಕ್ಕೆ ದೇಶವನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಅದೇ ಹಳೇ ಸಂಕಷ್ಟಕ್ಕೆ ದೇಶದ ಬಹುಸಂಖ್ಯಾತರನ್ನು ಸಿಲುಕಿಸಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.


ಸಂಕಷ್ಟ ಕಾಲದಲ್ಲೂ ಪ್ರಧಾನಿ ನರೇಂದ್ರ ಮೋದಿ ಜಾಣಮೌನ ಮತ್ತು ಮಹಾಮೌನ ವ್ರತ ಪಾಲನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬುದ್ಧಿವಂತರು, ಜ್ಞಾನಿಗಳು ಮಾತನಾಡದಿದ್ದರೆ ಪ್ರಕೃತಿಗೆ ದ್ರೋಹ ಮಾಡಿದಂತಾಗಲಿದೆ. ಮಾತನಾಡುವ ಸಂದರ್ಭದಲ್ಲೇ ಮಾತನಾಡಬೇಕಿದೆ. ಸಂವಿಧಾನ, ಪ್ರಜ್ಞಾಪ್ರಭುತ್ವದ ಕತ್ತು ಹಿಸುಕುವ ಪರಿಸ್ಥಿತಿಯನ್ನು ಜನರಿಗೆ ತಿಳಿಸಬೇಕಿದೆ ಎಂದರು.


ಸರ್ಕಾರಗಳು, ರಾಜಕೀಯ ಪಕ್ಷಗಳು ಬರುತ್ತವೆ, ಹೋಗುತ್ತವೆ. ನೆಲದ ಕಾನೂನು, ಸಂವಿಧಾನ ಶಾಶ್ವತ. ಆದರೀಗ ರಾಜಕೀಯ ಪಕ್ಷಗಳು ದೇಶದ ಅಖಂಡತೆ, ಸಮಗ್ರತೆಗೆ ಅಪಾಯ ಉಂಟು ಮಾಡುತ್ತಿವೆ. ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಹ್ವಾನಿಸದೆ ಅಪಮಾನ ಮಾಡಲಾಗಿದ್ದು, ಸಂವಿಧಾನದ ಮೌಲ್ಯವನ್ನು ಪಾಲನೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.


ದೇಶದಲ್ಲಿ ಶೇ.83ರಷ್ಟು ಯುವ ಜನರು ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಯಾರು ಉತ್ತರ ಕೊಡಬೇಕು ಎಂದರು.


ಅಂಬೇಡ್ಕರ್ ವಿಚಾರ, ಚಿಂತನೆ ಅರ್ಥ ಮಾಡಿಕೊಳ್ಳದವರು, ಅದನ್ನು ಪಾಲನೆ ಮಾಡದವರು ದೇಶಕ್ಕೆ ಕಂಟಕ. ಇವರು ನಿಜಕ್ಕೂ ದೇಶ ದ್ರೋಹಿಗಳು. ಇಂತಹವರಿಂದ ದೇಶ ಹಾಳಾಗುತ್ತಿದೆ ಎಂದು ಹರಿಹಾಯ್ದರು.


ಕಾರ್ಯಕ್ರಮದಲ್ಲಿ ಚಾಮರಾಜನಗರ ನಳಂದ ಬುದ್ಧ ವಿಹಾರದ ಬೋಧಿದತ್ತ ಭಂತೇಜಿ, ಸಮ್ಮೇಳನದ ಸಂಚಾಲಕ ಅಹಿಂದ ಜವರಪ್ಪ, ಚಿಂತಕರಾದ ವಾಸು, ಜಗದೀಶ್, ಡಾ.ಜಗನ್ನಾಥ ಇನ್ನಿತರರಿದ್ದರು. ಬಳಿಕ ಗಿರೀಶ್ ಮಾಚಳ್ಳಿ ರಚನೆ, ನಿರ್ದೇಶನದ ಬುದ್ಧಯಾನ ನಾಟಕ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net