ತಪ್ಪಿತಸ್ಥರನ್ನು ಬಂಧಿಸಲು ಟಿ.ಇ.ಸುರೇಶ್ ಆಗ್ರಹ

2620749c-1c4b-4464-b160-44d461bd36ea
Published on

ಮಡಿಕೇರಿ: ಬಿಜೆಪಿ ಮತ್ತು ಸಂಘ ಪರಿವಾರದ ಪ್ರತಿಭಟನೆಗೆ ಸಹಕರಿಸಿದ ಕೊಡಗಿನ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗಳ ಮೇಲೆ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಇ.ಸುರೇಶ್ ಆಗ್ರಹಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಿಲ್ಲಾ ಪ್ರವಾಸದ ವಿಚಾರ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ತಿಳಿದಿತ್ತು. ಈ ಸಂಬಂಧ ಸಭೆ ಕೂಡ ನಡೆಸಿಲ್ಲ. ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದರು.


ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿ, ಆ.೨೬ ರಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಈ ಸಂಬಂಧ ಎಲ್ಲಾ ಸಿದ್ಧತೆ ನಡೆಯುತ್ತಿದೆ ಎಂದ ಅವರು, ಪ್ರಸಕ್ತ ಸಾಲಿನಲ್ಲಿ ಕೊಡಗಿನಲ್ಲಿ ಸುರಿದ ಮಳೆಯಿಂದ ತುಂಬಾ ಹಾನಿಯಾಗಿ ಜನಸಾಮಾನ್ಯರು ತುಂಬಾ ನಷ್ಟ ಅನುಭವಿಸಿದ್ದಾರೆ. ಬಿಜೆಪಿ ಆಡಳಿತರೂಢ ರಾಜ್ಯ ಸರ್ಕಾರ ಮಳೆಯಿಂದ ಹಾನಿಯಾದ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಪರಿಹಾರ ನೀಡಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಬಹಳಷ್ಟು ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಬಿಡಿ ಕಾಸು ಹಣವನ್ನು ನೀಡಿರುವುದಿಲ್ಲ ಎಂದು ದೂರಿದರು.


ಸುದ್ದಿಗೋಷ್ಠಿಯಲ್ಲಿ ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ಶುಭಾಶೇಖರ್, ನಗರ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಶ್ರಫ್, ಹೆಬ್ಬಾಲೆ ಗ್ರಾ.ಪಂ ಅಧ್ಯಕ್ಷ ಮಂಜುನಾಥ್, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಈರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net