ಕ್ಷಯ ಮುಕ್ತಗೊಳಿಸಲು ಕೈಜೋಡಿಸಿ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿಕೆ

1 (3)
Published on

ಮಂಡ್ಯ: ಹಲವು ಜಾಗೃತಿ ಕಾರ್ಯಕ್ರಮಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಿ ಜಿಲ್ಲೆಯಲ್ಲಿ ಕ್ಷಯ ರೋಗವನ್ನು ಕೊನೆಗಾಣಿಸಲು ಗಣನೀಯವಾದ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಟಿ.ಬಿ ಮುಕ್ತ ಗ್ರಾಮ ಪಂಚಾಯಿತಿ ನಿರ್ಮಾಣ ಸಂಬಂಧ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ 2025ರ ವೇಳೆಗೆ ಕ್ಷಯ ಮುಕ್ತ ಭಾರತ ಮಾಡುವ ಗುರಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ ಯೋಜನೆಗಳನ್ನು ರೂಪಿಸಿ ಹಲವಾರು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಷಯ ರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಗುಣಮುಖ ರಾಗಬಹುದು. ಆದ್ದರಿಂದ ರೋಗದ ಬಗ್ಗೆ ಸಾರ್ವಜನಿಕರು ಇರುವ ಭಯವನ್ನು ದೂರ ಮಾಡಿಕೊಂಡು ವೈದ್ಯರಲ್ಲಿ ಮುಕ್ತವಾಗಿ ಚರ್ಚಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟಾರೆ 700 ಪಾಸಿಟಿವ್ ಕೇಸ್‌ಗಳು ದಾಖಲಾಗಿದೆ. ಅಂತೆಯೇ ಅವರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಆರು ತಿಂಗಳ ಕಾಲ ಮಾತ್ರೆ ಸೇವನೆಯು ಅಗತ್ಯವಾಗಿರುತ್ತದೆ. ಕ್ಷಯರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಪ್ರತಿ ಗ್ರಾಮಗಳಲ್ಲೂ ಆಂದೋಲನದ ರೀತಿ ಕಾರ್ಯಕ್ರಮಗಳನ್ನು ಮಾಡಬೇಕು. ಆಗ ಮಾತ್ರ ಜಿಲ್ಲೆಯನ್ನು ಕ್ಷಯ ಮುಕ್ತವನ್ನಾಗಿ ಮಾರ್ಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ(ಆಡಳಿತ) ಎಂ.ಬಾಬು, ಉಪ ಕಾರ್ಯದರ್ಶಿ(ಅಭಿವೃದ್ಧಿ) ಸಂಜೀವಪ್ಪ, ಯೋಜನಾ ನಿರ್ದೇಶಕ ಧನರಾಜ್ ಬೋರಾಳೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಎಂ.ಎನ್.ಆಶಾಲತಾ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ತಮ್ಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net