78ರ ಮಾಡೆಲ್ ಜಯಚಂದ್ರ... ಗಾಳಿಗಂಟಲು ರಾಜಣ್ಣ...!

tb jayachandra
Published on

ತುಮಕೂರು: ಟಿ.ಬಿ. ಜಯಚಂದ್ರ 78ರ ಮಾಡೆಲ್ ಇಂಜಿನ್; ಇನ್ನೂ ಗಟ್ಟಿಯಿದೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಸ್ಯ ಚಟಾಕಿ ಹಾರಿಸಿದರು. ಟಿಬಿಜೆ ಆರೋಗ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕ್ಷೇತ್ರದೆಲ್ಲಡೆ ಕಾಲಿಗೆ ಚಕ್ರ ಕಟ್ಟಿಕೊಂಡು ಯುವಕರನ್ನು ನಾಚಿಸುವಂತೆ ಜಯಚಂದ್ರ ಸುತ್ತುತ್ತಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಇತ್ತೀಚೆಗೆ ಪಕ್ಷದ ಸಭೆಯಲ್ಲಿ "ಏ ಜಯಚಂದ್ರ ನೀನು 78ರ ಮಾಡೆಲ್ ಕಣಯ್ಯ.. ಬದಲಾಗಬೇಕು, ಈಗಿನ‌ ಕಾಲದ ಯುವಕರನ್ನು ಜತೆಗೆ ಕರೆದುಕೊಂಡು ಚುನಾವಣೆ ನಡೆಸಬೇಕು.‌ ಕ್ಷೇತ್ರದಲ್ಲಿ ಎಲ್ಲರನ್ನೂ ಸರಿಮಾಡಿಕೊಳ್ಳಬೇಕು'' ಎಂದು ಸೂಚಿಸಿದ್ದರು.

ಗಾಳಿಗಂಟಲು!: ಜಿ.ಜೆ.ರಾಜಣ್ಣನವರನ್ನು ಗಾಳಿಗಂಟಲು ರಾಜಣ್ಣ ಎಂದು ಹೇಳುವ ಮೂಲಕ ಕೆ.ಎನ್.ರಾಜಣ್ಣಗೆ ಟಾಂಗ್ ಕೊಟ್ಟ ಪರಮೇಶ್ವರ್, ರಾಜಣ್ಣ ಎನ್ನುವವರೇ ಅಷ್ಟು. ನೀನು (ಕೆಎನ್ನಾರ್) ದೊಡ್ಡ ಗಾಳಿಗಂಟಲು. ಜಿ.ಜೆ.ರಾಜಣ್ಣ ಸಣ್ಣ ಗಾಳಿಗಂಟಲು ಎಂದಾಗ ಸಭೆ ನಗೆಗಡಲಲ್ಲಿ ತೇಲಿತು.

ಶಿರಾ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಉಪಸಮರ ಉಸ್ತುವಾರಿ ಪರಮೇಶ್ವರ್, ಈ ಸರ್ಕಾರ ಹೆಚ್ಚು ದಿನ ಇರುತ್ತದೆ ಎಂಬ ವಿಶ್ವಾಸವಿಲ್ಲ. ಬಿಜೆಪಿ ವಿದ್ಯಮಾನಗಳನ್ನು ನೋಡಿದರೆ ಹಾಗನಿಸುತ್ತಿದೆ ಎಂದರು. ಕೆ.ಎನ್.ರಾಜಣ್ಣ, ಕಾರ್ಯಾಧ್ಯಕ್ಷ ಸಾಸಲುಸತೀಶ್, ಮಾಜಿ ಶಾಸಕ ವೆಂಕಟರಮಣಪ್ಪ, ಟಿ.ಬಿ.ಜಯಚಂದ್ರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net