

ಬೆಂಗಳೂರು: ಮುಂಬರುವ ಜೂನ್ ತಿಂಗಳಿನಲ್ಲಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಐರ್ಲೆಂಡ್ ಹಾಗೂ ಸ್ಕಾಟ್‌ಲೆಂಡ್ ತಂಡಗಳಿಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಪ್ರಾಯೋಜಕತ್ವ ವಹಿಸುವ ನಿರ್ಧಾರ ಕೈಗೊಂಡಿದೆ.
ಕೆಎಂಎಫ್ ತನ್ನ ನಂದಿನಿ ಬ್ರ್ಯಾಂಡ್‌ಅನ್ನು ಜಾಗತಿಕ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಇಂತಹ ತೀರ್ಮಾನವನ್ನು ತೆಗೆದುಕೊಂಡಿದೆ. ಇದೇ ವೇಳೆ ಅಮೆರಿಕ ಮಾರುಕಟ್ಟೆಯ ಕದ ತಟ್ಟಲು ‘ನಂದಿನಿ ಸ್ಪ್ಲಾಶ್’ ಎಂಬ ಶಕ್ತಿ ವರ್ಧಕ ಪೇಯವನ್ನು ಬಿಡುಗಡೆ ಮಾಡಲಿದೆ. ಮಾವು, ಕಿತ್ತಲೆ, ಲಿಂಬೆ ಸಹಿತ ನಾಲ್ಕೈದು ಮಾದರಿಗಳಲ್ಲಿ ಈ ಶಕ್ತಿ ವರ್ಧಕ ಪೇಯವನ್ನು ಅಮೆರಿಕ ಗ್ರಾಹಕರಿಗಾಗಿಯೇ ಸಿದ್ಧಪಡಿಸಲಾಗುತ್ತಿದೆ.
ಇದರ ಜತೆಗೆ ಕೆಎಂಎಫ್ ಯುಎಇ, ಶಾರ್ಜಾದಲ್ಲಿ ಹೆಚ್ಚುವರಿ ನಂದಿನಿ ಪಾರ್ಲರ್ ತೆರೆಯುವ ಇಂಗಿತ ವ್ಯಕ್ತವಾಗಿದೆ. ಇದೇ ಬಗೆಯ ಪಾರ್ಲರ್‌ಗಳನ್ನು ಮಧ್ಯಪ್ರಾಚ್ಯ ದೇಶಗಳಲ್ಲೂ ಆರಂಭಿಸಲು ಸಂಸ್ಥೆ ಚಿಂತನೆ ನಡೆಸಿದೆ.
ಕೆಎಂಎಫ್ ನಡೆಗೆ ಆಕ್ಷೇಪ:
ವಿದೇಶಿ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ಒದಗಿಸುವ ಕೆಎಂಎಫ್ ನಿಲುವಿಗೆ ಐಟಿ ಉದ್ಯಮಿ ಟಿ.ವಿ.ಮೋಹನ್‌ದಾಸ್ ಪೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಎಂಎಫ್ ನಡೆ ನಾಚಿಕೆಯ ವಿಷಯವಾಗಿದೆ. ಕರ್ನಾಟಕದ ರೈತರು ಹಾಗೂ ಗ್ರಾಹಕರ ಹಣವನ್ನು ವಿದೇಶಿ ಕ್ರಿಕೆಟ್ ತಂಡಗಳಿಗೆ ಏಕೆ ಬಳಸಲಾಗುತ್ತಿದೆ. ಇದು ಯಾವ ಸಂದೇಶವನ್ನು ರವಾನಿಸಲಿದೆ. ಇದರ ಬದಲು ನಮ್ಮದೇ ರೈತರಿಗೆ ಪಾವತಿಸಬಹುದಲ್ಲವೇ? ಎಂದು ಅವರು ‘ಎಕ್ಸ್’ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.