ಅಲೋಶಿಯಸ್ ವಿವಿಯಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ

mng--23 june alocius yoga
Published on

ಮಂಗಳೂರು: ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾಲೇಜಿನ ಅರುಪೆ ಸಭಾಂಗಣದಲ್ಲಿ ನಡೆಯಿತು.


ದೇಲಂಪಾಡಿ ಯೋಗ ಪ್ರತಿಷ್ಠಾನ, ಆವಿಷ್ಕಾರ್ ಯೋಗ, ಹಾಗೂ ಡೆಕತ್ಲಾನ್ ಇದರ ಸಹಭಾಗಿತ್ವದಲ್ಲಿ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೋಶ, ದೈಹಿಕ ಶಿಕ್ಷಣ ವಿಭಾಗ, ಎನ್‌ಸಿಸಿ, ಎನ್ ಎಸ್ ಎಸ್, ಯೂತ್ ರೆಡ್‌ಕ್ರಾಸ್ ಹಾಗೂ ಯೋಗ ತಂಡದ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಜತೆಯಾಗಿ ಆಯೋಜಿಸಿದ್ದರು.


ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯೋಗ ಶಿಕ್ಷಕ ಕುಶಾಲಪ್ಪ ಗೌಡರು, ಯೋಗದಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಎಲ್ಲರೂ ದೈನಂದಿನ ಕಾರ್ಯಕ್ರಮಗಳೊಂದಿಗೆ ಯೋಗವನ್ನು ಜೋಡಿಸಿಕೊಳ್ಳಬೇಕೆಂದರು.


ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗ ನಿರ್ದೇಶಕಿ ನೀತಾ ಶೆಟ್ಟಿ ಅನೇಕ ಯೋಗಾಸನಗಳನ್ನು ಮಾಡುವುದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು. ಇವರೊಂದಿಗೆ ಕಾಲೇಜಿನ ಯೋಗ ವಿದ್ಯಾರ್ಥಿಗಳಾದ ರೋಶನಿ ಶೆಣೈ, ಸಾನ್ವಿ ಶೆಟ್ಟಿ ಹಾಗೂ ಸುಮೇಧಾ ಸಹಕರಿಸಿದರು.


ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ವಂ. ಡಾ.ಪ್ರವೀಣ್ ಮಾರ್ಟಿಸ್ ವಹಿಸಿದ್ದರು. ಒತ್ತಡ ರಹಿತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದರು. ಕಾಲೇಜಿನ ರಿಜಿಸ್ಟ್ರಾರ್ ಡಾ. ಆಲ್ವಿನ್ ಡೇಸಾ ಉಪಸ್ಥಿತರಿದ್ದರು.


ಅನೇಕ ಸಂಸ್ಥೆಗಳ ಎನ್.ಸಿ.ಸಿ. ಕೆಡೆಟ್‌ಗಳು ಭಾಗವಹಿಸಿದ್ದರು. ಲೆಫ್ಟಿನೆಂಟ್ ಕರ್ನಲ್ ಗ್ರೇಶನ್ ಸಿಕ್ವೇರಾ, ಆಡಳಿತಾಧಿಕಾರಿ 18 ಕರ್ನಾಟಕ ಬೆಟಾಲಿಯನ್, ಮಂಗಳೂರು ಹಾಗೂ ವಿಂಗ್ ಕಮಾಂಡರ್ ಪ್ರವೀಣ್ ಬಿಶ್ನೋಯಿ, ಕಮಾಂಡಿಂಗ್ ಆಫೀಸರ್, 6 ಕರ್ನಾಟಕ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ., ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದ ಸಂಯೋಜಕ ಡಾ. ಈಶ್ವರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅರುಣ್ ಡಿಸೋಜ ಅವರು ವಂದಿಸಿದರು. ರೋಶನಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net