ಬೆಂಗಳೂರು ವಿವಿಯಲ್ಲಿ ಜಾಗತಿಕ ಭಾಷೆಗಳನ್ನು ಕಲಿಸಲು ಸಿಂಡಿಕೇಟ್ ನಿರ್ಣಯ

Bangalore University
Published on

ಎನ್.ಎಲ್. ಶಿವಮಾದು

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬಿಸಿಎ, ಎಂಸಿಎ ಸೇರಿ ವಿವಿಧ ಕೋರ್ಸ್‌ಗಳನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದೇಸಗಳಲ್ಲಿ ಹಾಗೂ ವಿದೇಶಿ ಕಂಪನಿಗಳಲ್ಲಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ‘ಜಾಗತಿಕ ಭಾಷಾ ಕಲಿಕಾ ಕೇಂದ್ರ’ವನ್ನು ಆರಂಭಿಸಲು ನಿರ್ಧರಿಸಿದೆ.

ಇತ್ತೀಚೆಗೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಬಿಸಿಎ, ಎಂಸಿಎ ಪದವೀಧರರಿಗೆ ಯುರೋಪಿಯನ್ ದೇಶಗಳಲ್ಲಿ ಸುಲಭವಾಗಿ ಕೆಲಸ ಪಡೆದಿಕೊಳ್ಳಲು ಅನುಕೂಲವಾಗುವಂತೆ ಜರ್ಮನ್, ಜಾಪನೀಸ್, ್ರೆಂಚ್ ಸೇರಿದಂತೆ ಜಾಗತಿಕ ಭಾಷೆಗಳನ್ನು ಕಲಿಸಲು ಕ್ರಮ ಕೈಗೊಳ್ಳಬೇಕೆಂದು ಸಿಂಡಿಕೇಟ್ ಸದಸ್ಯ ಬಿ.ಡಿ. ಗಂಗರಾಜು ಒತ್ತಾಯಿಸಿದ್ದರು.

ಇದಕ್ಕೆ ಸಿಂಡಿಕೇಟ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಜ್ಞಾನಭಾರತಿ ಆವರಣದಲ್ಲಿ ಜಾಗತಿಕ ಭಾಷೆಗಳ ಕೇಂದ್ರವನ್ನು ಪ್ರಾರಂಭಿಸಲು ನಿರ್ಣಯಿಸಿದೆ.

ವಿದೇಶಿ ಭಾಷೆ ಬಲ್ಲವರಿಗೆ ಬೇಡಿಕೆ:

ಬೆಂಗಳೂರಿನಲ್ಲಿ ಜಾಗತಿಕವಾಗಿ ಹಲವು ದೇಶಗಳ ಕಂಪನಿಗಳು ನೆಲೆಯೂರಿವೆ. ಕಂಪನಿಯ ವಹಿವಾಟನ್ನು ಪರಿಶೀಲಿಸಲು ಸಭೆ, ಸಮ್ಮೇಳನ ಒಳಗೊಂಡಂತೆ ಇನ್ನಿತರ ಕಾರಣಕ್ಕೆ ಸಂಬಂಧಪಟ್ಟ ದೇಶಗಳ ಪ್ರತಿನಿಧಿಗಳು ಇಲ್ಲಿಗೆ ಆಗಮಿಸಿದಾಗ ಸಂವಹನ ನಡೆಸಲು ಭಾಷೆ ತಿಳಿದವರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಹಾಗೆಯೇ, ಕೋರ್ಸ್ ಜತೆಗೆ ಭಾಷೆ ತಿಳಿದರೆ ಜಪಾನ್, ಜರ್ಮನಿ, ಕೊರಿಯಾ ಸೇರಿ ಬೇರೆ ದೇಶಗಳಲ್ಲಿಯೂ ಉದ್ಯೋಗ ಅವಕಾಶಗಳು ಸಿಗಲಿವೆ. ಈ ಕಾರಣದಿಂದ ಜಾಗತಿಕ ಭಾಷೆಗಳನ್ನು ಕಲಿಸಲು ಬೆಂಗಳೂರು ವಿಶ್ವವಿದ್ಯಾಲಯವು ನಿರ್ಧರಿಸಿದೆ ಎನ್ನುತ್ತಾರೆ ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್.

ಕೇಂದ್ರ ಆರಂಭಿಸಲು ಕಾರಣವೇನು?

ಸದ್ಯ ಬೆಂಗಳೂರು ನಗರ ವಿವಿಯಲ್ಲಿ ಜಾಗತಿಕ ಭಾಷಾ ಕೇಂದ್ರವಿದೆ. ವಿವಿ ವಿಭಜನೆಯಾಗುವ ಮೊದಲು ಬೆಂಗಳೂರು ವಿವಿ ಅಡಿಯಲ್ಲಿಯೇ ಕೇಂದ್ರವು ಕಾರ್ಯನಿರ್ವಹಿಸುತ್ತಿತ್ತು. ಈಗ ನಗರ ವಿವಿಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಬೆಂಗಳೂರು ವಿವಿ ಕೂಡ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿರುವುದರಿಂದ ಕೇಂದ್ರವನ್ನು ಆರಂಭಿಸುತ್ತಿದೆ.

ಮೂರು ಹಂತದಲ್ಲಿ ಕೋರ್ಸ್:

ಐಟಿ ವಲಯ, ವೈದ್ಯಕೀಯ, ಉತ್ಪಾದನಾ ವಲಯ, ಆಟೋಮೊಬೈಲ್ ಸೇರಿ ಎಲ್ಲ ರಂಗದಲ್ಲಿಯೂ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವಿವಿಯಲ್ಲಿ 3 ತಿಂಗಳ ಅಲ್ಪಾವಧಿ ಕೋರ್ಸ್, ಒಂದು ವರ್ಷದ ಸರ್ಟಿಫಿಕೇಟ್ (ಪ್ರಮಾಣಪತ್ರ) ಕೋರ್ಸ್, ಯುಜಿ ಮತ್ತು ಪಿಜಿ ಕೋರ್ಸ್‌ಗಳಿವೆ.

ಕೋರ್ಸ್ ಮಾಡಿಕೊಂಡವರಿಗೆ ವಿವಿಧ ಹಂತದಲ್ಲಿ ಉದ್ಯೋಗ ಅವಕಾಶಗಳಿವೆ. ವಿದೇಶಕ್ಕೆ ಉದ್ಯೋಗದ ಮೇಲೆ ಪ್ರಯಾಣ ಬೆಳೆಸಲು ಮತ್ತು ಅಲ್ಲಿಯೇ ನೆಲೆಸುವುದಕ್ಕೆ ನಿರ್ಧರಿಸುವವರಿಗೂ ಸಂವಹನಕ್ಕೆ ಭಾಷೆ ಪ್ರಾಮುಖ್ಯತೆ ವಹಿಸಲಿದೆ ಎನ್ನುತ್ತಾರೆ ಬೆಂಗಳೂರು ನಗರ ವಿವಿ ಜಾಗತಿಕ ಭಾಷಾ ಕೇಂದ್ರದ ಮುಖ್ಯಸ್ಥೆ ಜ್ಯೋತಿ ವೆಂಕಟೇಶ್.

ಕೊರೊನಾ ಬಳಿಕ ಚೈನೀಸ್‌ಗೆ ಕುಸಿದ ಬೇಡಿಕೆ:

ನಗರ ವಿವಿ ಜಾಗತಿಕ ಕೇಂದ್ರದಲ್ಲಿ ಚೈನೀಸ್, ್ರೆಂಚ್, ಕೊರೊಯನ್, ಜರ್ಮನ್, ಜಾಪನೀಸ್, ಸ್ಪ್ಯಾನಿಷ್, ಪೋರ್ಚುಗೀಸ್, ಇಟಾಲಿಯನ್, ರಷ್ಯನ್ ಸೇರಿ ಹಲವು ಭಾಷೆಗಳನ್ನು ಕಲಿಸಲಾಗುತ್ತಿದೆ. ಕೊರೊನಾ ಬಳಿಕ ಚೈನೀಸ್ ಭಾಷೆಗೆ ಬೇಡಿಕೆ ಕುಸಿದಿದೆ. ಆದರೆ, ಚೈನೀಸ್ ಉತ್ಪನ್ನಗಳು ದೇಶಾದ್ಯಂತ ಮಾರಾಟವಾಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಬೇಡಿಕೆ ಬರಬಹುದು ಎನ್ನುತ್ತಾರೆ ಜ್ಯೋತಿ ವೆಂಕಟೇಶ್.

ಪದವೀಧರರು ವೃತ್ತಿಯಾಗಿ ಪರಿಗಣಿಸಿದಾಗ ಆಯಾ ಕೆಲಸಗಳಿಗೆ ಕೋರ್ಸ್‌ಗಳ ಮೂಲಕ ಜ್ಞಾನ ಪಡೆದಿರುತ್ತಾರೆ. ಅದರ ಜತೆಗೆ ಸಂವಹನ ಕೌಶಲಕ್ಕಾಗಿ ವಿದೇಶಿ ಭಾಷೆಗಳನ್ನು ಕಲಿತರೆ ಮತ್ತಷ್ಟು ಅವಕಾಶಗಳು ದೊರೆಯಲಿವೆ. ಈ ಉದ್ದೇಶದಿಂದ ಜಾಗತಿಕ ಭಾಷಾ ಕೇಂದ್ರವನ್ನು ತೆರೆಯಲಾಗುತ್ತಿದೆ. - ಡಾ. ಎಸ್.ಎಂ. ಜಯಕರ್, ಬೆಂವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net