

ಮಂಡ್ಯ: ನಿತ್ಯಸಚಿವ ಕೆ.ವಿ.ಶಂಕರಗೌಡ ಅವರಂತೆ ಇಂದಿನ ರಾಜಕಾರಣಿಗಳು ಸಾಂಸ್ಕೃತಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಚಾರ ಸಂಕಿರಣ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಿಲ್ಲಾಡಳಿತ, ಕೆ.ವಿ.ಶಂಕರಗೌಡ ಅಧ್ಯಯನ ಪೀಠ, ಕರ್ನಾಟಕ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆ.ವಿ.ಶಂಕರಗೌಡ-109 ಒಂದು ದಿನದ ನೆನಪು’ ವಿಚಾರ ಸಂಕಿರಣ ಹಾಗೂ ಮತ್ತೆ ಮತ್ತೆ ಶಂಕರಗೌಡ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಪ್ರತಿ ರಾಜಕಾರಣಿಯೂ ಒರ್ವ ಲೇಖನ, ಸಾಹಿತಿಯೊಂದಿಗೆ ಸ್ನೇಹ ಹೊಂದಿರಬೇಕು. ಏಕೆಂದರೆ ರಾಜಕಾರಣಿ ಮರಣ ಹೊಂದಿದ ಮೇಲೆ ಪಕ್ಷದ ಕಾರ್ಯಕರ್ತರು, ಜೈಕಾರ ಹಾಕುವವರು ಆತನ ಬಗ್ಗೆ ಮಾತನಾಡುವುದಿಲ್ಲ. ಅದೇ ಸಾಹಿತಿ ಜತೆಗಿದ್ದರೆ ರಾಜಕಾರಣಿಯನ್ನು ಬರಹದ ಮೂಲಕ ಜೀವಂತವಾಗಿರಿಸಿಕೊಳ್ಳುತ್ತಾರೆ ಎಂದರು.
ಕೆ.ವಿ.ಶಂಕರಗೌಡ ಅವರ ಸಾಧನೆ ಎಲ್ಲ ಕ್ಷೇತ್ರದಲ್ಲಿಯೂ ಅಪಾರ. ನಾನು ಎಂ.ಎ ಪದವಿ ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಕೆ.ವಿ.ಶಂಕರಗೌಡ ಅವರ ’ಕಬ್ಬಿನ ಹಾಲು’ ಪುಸ್ತಕವನ್ನು ಓದಿದ್ದೆ. ಇದರಿಂದ ನಾನು ಪದವಿ ಉತ್ತೀರ್ಣನಾಗಲು ನೆರವಾಗಿತ್ತು. ಏಕೆಂದರೆ ಆ ಪುಸ್ತಕದಲ್ಲಿ ಗ್ರಾಮೀಣ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯ ಬಗ್ಗೆ ವಿಶೇಷ ಲೇಖನವಿದ್ದವು ಎಂದ ಅವರು, ಸಾಹಿತ್ಯವನ್ನು ಜನರ ಬಳಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಪರಿಷತ್ ಮೇಲಿದೆ. ಅದರಂತೆ ಜನ ಸೇರಿಸಿಕೊಂಡು ಕಾರ್ಯಕ್ರಮ ಮಾಡಬೇಕಾದ ಅನಿವಾರ್ಯತೆ ಇಲ್ಲ. ಭಾಗವಹಿಸುವವರೊಂದಿಗೆ ಚರ್ಚೆ ಮಾಡಿದರೂ ಸಾಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ನಾನು ಜಿಲ್ಲೆಗೆ ಬರುವ ಮುನ್ನವೇ ಕೆ.ವಿ.ಶಂಕರಗೌಡ ಅವರ ಬಗ್ಗೆ ಗೌರವ ಬೆಳೆಸಿಕೊಂಡಿದ್ದೆ. ಕಾರಣ ನನ್ನ ಸ್ನೇಹಿತ ಮಂಡ್ಯದವನಾಗಿದ್ದರಿಂದ ಆತ ಶಂಕರಗೌಡ ಅವರ ಬಗ್ಗೆ ಪ್ರತಿದಿನವೂ ಹೇಳುತ್ತಿದ್ದ. ಕೆವಿಎಸ್ ನಿಸ್ವಾರ್ಥ ಸೇವೆ, ಸಾಮಾಜಿಕ ಚಿಂತನೆ ಮೂಲಕ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ. ಅವರನ್ನು ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ ಎಂದು ಬಣ್ಣಿಸಿದರು.
ಶಂಕರಗೌಡ ಅವರು ಸಚಿವರಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ನಿತ್ಯ ಸಚಿವ ಎಂಬ ಹೆಸರನ್ನು ಗಳಿಸಿಕೊಂಡರು. ರೈತರ ಮಗನಾಗಿ ಹುಟ್ಟಿ ರೈತಾಪಿ ವರ್ಗದವರಿಗೆ ಅನೇಕ ಕಾರ್ಯಕ್ರಮಗಳನ್ನು ತಂದು ರೈತರ ದನಿಯಾಗಿ ನಿಂತವರು. ಜತೆಗೆ ಕಲೆಯ ಬಗ್ಗೆ ಅಪಾರವಾದ ಪ್ರೇಮವನ್ನು ಇಟ್ಟುಕೊಂಡು ಕಲಾವಿದರನ್ನು ಪ್ರೋತ್ಸಾಹಿಸಿದವರು. ಆದ್ದರಿಂದ ಅವರನ್ನು ಮಂಡ್ಯದ ಮಾಣಿಕ್ಯವೆನ್ನಬಹುದು ಎಂದು ಶ್ಲಾಘಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಪರಂಪರೆ ಎಂಬುದು ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಹಿಂದೆ ಇದ್ದಂತಹ ಸಾಹಿತ್ಯ, ಬದುಕು, ರಾಜಕೀಯದ ಸಾರಾಂಶಗಳು ಸೇರಿದಂತೆ ಇನ್ನಿತರೆ ವಿಷಯಗಳನ್ನು ಉಳಿಸಿಕೊಂಡು ಹೋಗಲು ಕೆ.ವಿ ಶಂಕರೇಗೌಡ ಅವರ ಜೀವನ ಸಾಧನೆಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಹಿರಿಯ ಸಾಹಿತಿ ಡಾ.ರಾಗೌ ಮಾತನಾಡಿ, ಕರ್ನಾಟಕ ಸಂಘ ಪ್ರತಿ ವರ್ಷ ಕೆ.ವಿ.ಶಂಕರಗೌಡ ಅವರ ಜನ್ಮದಿನವನ್ನು ಆಚರಿಸುವುದು ವಾಡಿಕೆ. ಕೆವಿಎಸ್ ಅವರ ತತ್ವಾದರ್ಶ ಹಾಗೂ ಚಿಂತನೆಯನ್ನು ಜನರಿಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಶಂಕರಗೌಡ ಅವರು ಅನ್ಯಾಯಕ್ಕೆ ತಲೆಬಾಗದೆ ಸತ್ಯದ ದಾರಿಯಲ್ಲಿ ನಡೆಯುವ ವ್ಯಕ್ತಿತ್ವ ಹೊಂದಿದ್ದವರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಕೆವಿಎಸ್ ಮಂಡ್ಯ ಜಿಲ್ಲೆ ಕಂಡಂತಹ ಅತ್ಯುತ್ತಮ ರಾಜಕಾರಣಿ. ಅವರ ಆಲೋಚನಾ ಕ್ರಮ ದೇಶವನ್ನೇ ವ್ಯಾಪಿಸಿದೆ. ಮುಖ್ಯವಾಗಿ ಶೈಕ್ಷಣಿಕ ಚಿಂತನೆ ಇವತ್ತಿಗೂ ನಮಗೆ ಆದರ್ಶ ಎಂದರು.
ಅಕಾಡೆಮಿ ರಿಜಿಸ್ಟ್ರರ್ ಎನ್.ಕರಿಯಪ್ಪ ಮತ್ತು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಅಕಾಡೆಮಿ ಸದಸ್ಯ ಸಂಚಾಲಕಿ ಎಚ್.ಆರ್.ಸುಜಾತಾ ಇತರರಿದ್ದರು.