

ಮಂಡ್ಯ: ತಮಿಳುನಾಡು ದ್ವಿಭಾಷಾ ನೀತಿ ಅಳವಡಿಸಿಕೊಂಡಿದೆ. ಆದರೆ, ಕರ್ನಾಟಕದಲ್ಲಿ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಇದರ ಪರಿಷ್ಕರಣೆಯಾಗಿ ದ್ವಿಭಾಷಾ ನೀತಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಅದರಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಮೊದಲ ಅಥವಾ ಎರಡನೇ ಭಾಷೆಯಾಗಿ ಕಡ್ಡಾಯವಾಗಿ ಕನ್ನಡವನ್ನು ಕಲಿಯಬೇಕೆಂಬ ನಿಯಮ ಜಾರಿಗೆ ಬರಬೇಕು. ಆಗ ಮಾತ್ರ ಕನ್ನಡ ಉಳಿಯಲು ಸಾಧ್ಯವಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೀಲಾರದ ಕ್ಷೀರಸಾಗರ ಮಿತ್ರಕೂಟ ವತಿಯಿಂದ ಆಯೋಜಿಸಿದ್ದ ಶಿಕ್ಷಣ ಮತ್ತು ಭಾಷೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ನಾಲ್ಕು ವರ್ಷದ ಹಿಂದೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ವರದಿ ಪ್ರಕಾರ ದೇಶದಲ್ಲಿ 1947ರ ನಂತರ 254 ಭಾಷೆ ಕಣ್ಮರೆಯಾಗಿವೆ. ಅದರಂತೆ 2011ರ ಯುನೆಸ್ಕೊ ವರದಿ ಪ್ರಕಾರ ಮುಂದಿನ 50 ವರ್ಷದಲ್ಲಿ 390 ಭಾಷೆ ಕಣ್ಮರೆಯಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
1990ರ ನಂತರ ಜಾಹೀರಾತಿನ ಏಕರೂಪಿ ಭಾಷೆಯ ಪರಿಣಾಮವಾಗಿ ತುಳು, ಕೊಡವ, ಕನ್ನಡ, ಮರಾಠಿ, ಗುಜರಾತಿ ಮುಂತಾದ ಭಾಷೆಗಳು ಸಂಕಷ್ಟಕ್ಕೆ ಸಿಲುಕಿವೆ. 2001ರ ಜನಗಣತಿಯಲ್ಲಿ 1.66 ಲಕ್ಷವಿದ್ದ ಕೊಡವ ಭಾಷಿಕರು, 2011ರ ಜನಗಣತಿ ವೇಳೆಗೆ 1.36 ಲಕ್ಷಕ್ಕೆ ಇಳಿಕೆಯಾಗಿದ್ದಾರೆ. ಅಂದರೆ, 10 ವರ್ಷದಲ್ಲಿ 30 ಸಾವಿರ ಕೊಡವ ಭಾಷಿಕರ ಸಂಖ್ಯೆ ಕಡಿಮೆಯಾಗಿದೆ. ಅದೇ ರೀತಿ ಕೊಂಕಣಿ ಭಾಷಿಕರ ಸಂಖ್ಯೆ ಶೇ.9ರಷ್ಟು ಕಡಿಮೆಯಾಗಿದೆ. 55 ಸಾವಿರದಿಂದ 5 ಸಾವಿರಕ್ಕೆ ಕೊರಗ ಭಾಷಿಕರ ಸಂಖ್ಯೆ ಕುಸಿದಿದೆ. ಮುಂದಿನ 40 ವರ್ಷದಲ್ಲಿ ಕೊರಗ ಭಾಷೆ ನಶಿಸಿಹೋಗುವ ಆತಂಕ ಕಾಡುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕನ್ನಡದ ಬಗ್ಗೆ ಕೀಳರಿಮೆ ಹೆಚ್ಚಾಗುತ್ತಿದೆ. ಪ್ರತಿ ಮನೆಯಲ್ಲೂ ಮಕ್ಕಳಿಗೆ ಭಾಷಾಭಿಮಾನ ಬೆಳೆಸಬೇಕು. ಪುಸ್ತಕ ಪ್ರೀತಿ ಬೆಳೆಸಬೇಕು. ಮನೆ ದೇವರಂತೆ ಕನ್ನಡವನ್ನು ಆರಾಧಿಸಿ. ಅಪ್ಪಟ ಕನ್ನಡ ಜಿಲ್ಲೆಯಾದ ಮಂಡ್ಯದಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 3,200 ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ವಿಶೇಷವಾಗಿ ಕನ್ನಡ ಭಾಷಾ ಶಿಕ್ಷಕರ ಮೇಲೆ ಗುರುತರವಾದ ಜವಾಬ್ದಾರಿ ಹೆಚ್ಚಿದೆ ಎಂದರು.
ಪ್ರಾಧಿಕಾರ ಸದಸ್ಯ ತಿಮ್ಮೇಶ್ ಮಾತನಾಡಿ, ನಾಡಗೀತೆಯ 100ರ ಸಂಭ್ರಮದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸಹಸ್ರ ಕಂಠದಲ್ಲಿ ನಾಡಗೀತೆ ಹಾಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ಪ್ರೊ.ಜಿ.ಉಷಾರಾಣಿ ಇದ್ದರು. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಕನ್ನಡ ಭಾವಗೀತೆಗಳ ಗಾಯನ ಪ್ರಸ್ತುತಪಡಿಸಲಾಯಿತು.