ಉತ್ತಮ ಹವ್ಯಾಸ, ಶಿಸ್ತು ರೂಢಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

Symposium on Drug Abuse Mandya
Published on

ಮಂಡ್ಯ: ಯುವಶಕ್ತಿ ದೇಶದ ಅಮೂಲ್ಯ ಆಸ್ತಿ. ವಿದ್ಯಾರ್ಥಿಗಳು ಮದ್ಯ ಮತ್ತು ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗಬಾರದು. ಈ ಹಿನ್ನೆಲೆಯಲ್ಲಿ ಉತ್ತಮ ಹವ್ಯಾಸ ಹಾಗೂ ಸ್ವಯಂ ಶಿಸ್ತನ್ನು ರೂಢಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸಲಹೆ ನೀಡಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಿಮ್ಸ್ ಹಾಗೂ ಅನನ್ಯ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಹುಟ್ಟಿನಿಂದ ಯಾರು ಕೂಡ ದುಶ್ಚಟವನ್ನು ಕಲಿತಿರುವುದಿಲ್ಲ. ಜೀವನದಲ್ಲಿ ಬೆಳೆಯುತ್ತ ಸ್ನೇಹಿತರು, ಕೆಲ ಘಟನೆಗಳಿಂದ ಮದ್ಯ ಮತ್ತು ಮಾದಕ ವಸ್ತುಗಳು ಅಪಾಯಕಾರಿ. ಸೇವನೆಯನ್ನು ರೂಢಿಸಿಕೊಳ್ಳುತ್ತಾರೆ. ಇವುಗಳಿಂದ ದೂರವಿರಲು ಮೌಲ್ಯಯುತ ಜೀವನ ವಿದ್ಯಾರ್ಥಿಗಳಿಗೆ ಅತಿ ಮುಖ್ಯ ಎಂದರು.

ಸಾಮಾಜಿಕ ಪಿಡುಗಾಗಿರುವ ಮದ್ಯ ಮತ್ತು ಮಾದಕ ವಸ್ತುಗಳ ಸೇವನ ವೈಯಕ್ತಿಕ ಜೀವನ, ಆರೋಗ್ಯ ಮಾತ್ರವಲ್ಲ ಕೌಟುಂಬಿಕ ಜೀವನವನ್ನು ಸಹ ನಾಶ ಮಾಡುತ್ತದೆ. ವಿದ್ಯಾರ್ಥಿ ಜೀವನದ ಹಂತದಲ್ಲೇ ಉತ್ತಮ ಹವ್ಯಾಸ, ಸಹವಾಸ ಹಾಗೂ ಪರಿಸರವನ್ನು ಆಯ್ಕೆ ಮಾಡಿಕೊಳ್ಳಿ. ಇದರಿಂದ ಜೀವನದಲ್ಲಿ ನಿಗದಿಪಡಿಸಿಕೊಂಡಿರುವ ಗುರಿಯನ್ನು ಅಡೆ ತಡೆ ಇಲ್ಲದೇ ತಲುಪಬಹುದು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಮದ್ಯವನ್ನು ಪರವಾನಗಿ ಪಡೆದು ಮಾರಾಟ ಮಾಡಬಹುದು. ನಿಯಮ ಅನುಸರಿಸಿ ಸೇವನೆ ಮಾಡಬಹುದು. ಆದರೂ ಸಹ ಮದ್ಯ ಸೇವನೆ ಕುರಿತು ಪ್ರತಿ ದಿನ ಪೊಲೀಸ್ ಕಂಟ್ರೋಲ್ ರೂಂಗೆ ಹಲವಾರು ದೂರು ಬರುತ್ತವೆ. ಇದರಿಂದ ಸಮಾಜದಲ್ಲಿ ಉಂಟಾಗುತ್ತಿರುವ ತೊಂದರೆ ಬಗ್ಗೆ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಮದ್ಯ ಸೇವನೆಯಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.

ಮಾದಕ ವಸ್ತುಗಳಾದ ಡ್ರಗ್ಸ್ ಮತ್ತು ಗಾಂಜಾ ಸಂಗ್ರಹ, ಮಾರಾಟ ಹಾಗೂ ಸೇವನೆ ಅಪರಾಧ, ಡ್ರಗ್ಸ್‌ಗಳ ಮಾರಾಟ ಹಾಗೂ ಸೇವನೆಯನ್ನು ತಡೆಗಟ್ಟಲು ನಾರ್ಕೊಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್‌ಟೆನ್ಸ್(ಎನ್‌ಡಿಪಿಎಸ್) ನಿಯಂತ್ರಣ ಕಾಯ್ದೆ 1987 ನ್ನು ಜಾರಿಗೊಳಿಸಲಾಯಿತು. ನಾರ್ಕೊಟಿಕ್ ಡ್ರಗ್ಸ್ ಮಾರಾಟ ಹಾಗೂ ಸೇವನೆಗೆ ಕಾನೂನಿನಲ್ಲಿ ದಂಡ ಹಾಗೂ ಜೈಲುವಾಸ ಎರಡೂ ಇರುತ್ತದೆ. ಡ್ರಗ್ಸ್ ಪುಡಿ, ದ್ರವ, ಟ್ಯಾಬ್ಲೆಬ್ ಹಾಗೂ ವಿವಿಧ ರೂಪಗಳಲ್ಲಿ ಕಡಿಮೆ ಬೆಲೆಗಳಲ್ಲಿ ಸಿಗುತ್ತದೆ. ಇದರ ಜಾಲವನ್ನು ಪತ್ತೆಹಚ್ಚುವುದು ಕಷ್ಟಕರವಾಗಿರುತ್ತದೆ. ಇವುಗಳ ಮುಂದಿನ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿಯದೇ ಸೇವನೆ ಮಾಡಿ ತಮ್ಮ ಜೀವ ಹಾಗೂ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಡ್ರಗ್ಸ್ ಮಾರಾಟ ಅಥವಾ ಸೇವನೆ ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ ಎಂದರು.

ಉಪನ್ಯಾಸ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್, ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ವ್ಯಸನಿಗಳು ಸಹ ವ್ಯಸನ ಮುಕ್ತರಾಗಲು ಹಲವರು ಉತ್ತಮ ಅಭ್ಯಾಸಗಳಿವೆ ಎಂದು ವಿವರಿಸಿದರು.

ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಸಿ.ಶಿವಕುಮಾರ್, ಪ್ರಾಂಶುಪಾಲ ಪ್ರೊ.ಎಲ್.ಎಲ್.ಕ್ಲೆಮೆಂಟ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ತಿಮ್ಮರಾಜು, ಮಿಮ್ಸ್ ಕ್ರೀಡಾಧಿಕಾರಿ ಸುರೇಶ್, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು. ಇದೇ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ ಪ್ರತಿಜ್ಞೆ ವಿಧಿ ಭೋದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net