

ಮಂಡ್ಯ: ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಗಾಂಧಿಭವನದಲ್ಲಿ ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಪ್ರಸ್ತುತ ರಾಜಕೀಯದಲ್ಲಿ ಯುವಕರ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಯುವ ಸಮುದಾಯದಿಂದ ಮಾತ್ರ ಸಾಧ್ಯ. ಆದರೆ, ಹಾಸನ ಜಿಲ್ಲೆಯೊಂದರಲ್ಲೇ 15ಕ್ಕೂ ಹೆಚ್ಚು ಯುವಕ ಯುವತಿಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಕೇಳಿ ಬೇಸರವಾಯಿತು. ಇದಕ್ಕೆ ಅತಿಯಾಗಿ ಮೊಬೈಲ್ ಬಳಕೆ ಮಾಡುವುದೇ ಕಾರಣವೆಂದು ಹೇಳಲಾಗುತ್ತಿದೆ. ದೇಶದ ಭವಿಷ್ಯದ ಪ್ರಜೆಗಳು ಈ ರೀತಿ ಹೃದಯಾಘಾತಕ್ಕೀಡಾಗುತ್ತಿರುವುದು ಆತಂಕದ ವಿಷಯ. ಈ ನಡುವೆ ಜನಪರ ಹೋರಾಟ ಮಾಡುವ ಯುವಕರು ಸಂಖ್ಯೆ ಕಡಿಮೆಯಾಗುತ್ತಿದೆ. ಸಮಾಜದ ಹಿತದೃಷ್ಟಿಯಿಂದ ಯುವ ಸಮುದಾಯ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ರಾಜ್ಯಸಭೆ ಸದಸ್ಯ ಹಾಗೂ ಸಾಹಿತಿ ಎಲ್.ಹನುಮಂತಯ್ಯ ಮಾತನಾಡಿ, ಉತ್ತಮ ಶಿಕ್ಷಣದಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಪ್ರಸ್ತುತ ರಾಜ್ಯದಲ್ಲಿ 21 ಸಾವಿರ ಸರ್ಕಾರಿ ಶಾಲೆಗಳು ಸೋರುವ ಶಾಲೆಗಳಾಗಿ ಪರಿವರ್ತನೆಯಾಗಿವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ. ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಹಾಗೂ ಸಾಮಾಜಿಕ ಸಾಮರಸ್ಯ ಸಿಕ್ಕಿದಾಗ ಮಾತ್ರ ಉತ್ತಮ ಸಮಾಜವಾಗಲು ಸಾಧ್ಯ ಎಂದರು.
ರಾಜ್ಯದಲ್ಲಿ ಅಪೌಷ್ಠಿಕತೆ ಇದೆ. ಶೇ.35ರಷ್ಟು ಹೆಣ್ಣು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಶೇ.30ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ. ಯುವಕರು ಇವೆಲ್ಲವನ್ನು ಕೇಳುವ ಶಕ್ತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ನಾವು ಸ್ಪಷ್ಟವಾದ ರಾಜ್ಯದಲ್ಲಿ ಬದುಕುತ್ತಿದ್ದೇವೆ ಎಂದು ಭಾಷವಾಗುತ್ತದೆ. ಯುವಕರಾದ ನೀವೆ ಪ್ರಶ್ನೆ ಮಾಡದಿದ್ದರೆ, ಇವರನ್ನು ಕೇಳುವವರು ಯಾರು ಎಂದು ಪ್ರಶ್ನಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿ, ಸಂಘಟಿತ ಹೋರಾಟಕ್ಕೆ ತನ್ನದೇ ಆದ ಶಕ್ತಿ ಇದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಒಗ್ಗೂಡಬೇಕು. ಕೆಆರ್‌ಎಸ್ ಬಳಿ ರಾಜ್ಯಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಮಾಡಲು ನಿರ್ಧರಿಸಿದೆ. ಇದರಿಂದ ಡ್ಯಾಂಗೆ ಅಪಾಯವಾಗುವ ಸಂಭವವಿದೆ. ಇದನ್ನು ಖಂಡಿಸಿ ಹಲವಾರು ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇದಕ್ಕೆ ಯುವಕರು ಧ್ವನಿಯಾಗಬೇಕು. ಅಣೆಕಟ್ಟೆ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಈ ಯೋಜನೆಗಳನ್ನು ಧಿಕ್ಕರಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ್, ನಗರಸಭೆ ಸದಸ್ಯೆ ಸೌಭಾಗ್ಯಾ, ಹಾಸ್ಯನಟ ಟೆನ್ನಿಸ್ ಕೃಷ್ಣ, ಮಂಜುನಾಥ್ ಇತರರಿದ್ದರು.