

ಮಂಡ್ಯ: ಮಹಾತ್ಮ ಗಾಂಧೀಜಿ ಇಪ್ಪತ್ತನೇ ಶತಮಾನ ಕಂಡಂತಹ ಕ್ರಾಂತಿಕಾರಿ ಮನುಷ್ಯ. ಅವರ ಕೊಡುಗೆ ಕೇವಲ ಸ್ವಾತಂತ್ರ್ಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದನ್ನು ಮೀರಿ ಕೊಡುಗೆಯನ್ನು ನೀಡಿದ್ದಾರೆ. ಇಂದು ನಾವು ಎದುರಿಸುತ್ತಿರುವ ಸಮಸ್ಯೆ, ಸವಾಲಿಗೆ ಗಾಂಧಿ ವಿಚಾರ, ಚಿಂತನೆಗಳಲ್ಲಿ ಪರಿಹಾರವಿದೆ. ಅದಕ್ಕಾಗಿಯೇ ಗಾಂಧಿ ವಿಚಾರಧಾರೆಗಳು ಸಾರ್ವಕಾಲಿಕವಾಗಿ ಉಳಿದುಕೊಂಡಿವೆ ಎಂದು ರಾಜ್ಯ ಜಲಸಾರಿಗೆ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಂ ರಾಯಪುರ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಪಟೇಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನದ ‘ಗಾಂಧಿ ಎಂಬ ವರ್ತಮಾನ’ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಅವರ ಜೀವನವೇ ಸತ್ಯಾಗ್ರಹ. ಅಂತೆಯೇ ಸತ್ಯಾಗ್ರಹವೆಂದರೆ ಸತ್ಯವನ್ನು ಆಗ್ರಹಿಸುವುದು. ಹಾಗಾಗಿ ಸತ್ಯಶೋಧನೆಯ ಮಾರ್ಗವೇ ಗಾಂಧಿ ಮಾರ್ಗವಾಗಿತ್ತು ಎಂದರು.
ಖಗೋಳ ಶಾಸ್ತ್ರ, ತತ್ವಶಾಸ್ತ್ರಕ್ಕೆ ಅಂತಿಮ ಸತ್ಯ ಎನ್ನುವುದಿಲ್ಲ. ಅದೇ ರೀತಿ ಸತ್ಯಶೋಧನೆಗೂ ಕೊನೆ ಎಂಬುದಿಲ್ಲ. ಗಾಂಧೀಜಿ ಅವರು ನಮ್ಮ ಜೀವನವೇ ಒಂದು ಸತ್ಯಶೋಧನೆಯಾಗಬೇಕು, ಸತ್ಯದ ಹಾದಿಯಲ್ಲೇ ಮುನ್ನಡೆಯುವಂತೆ ಸಂದೇಶ ನೀಡಿದರು. ಅದೇ ರೀತಿ ಅವರ ಹೋರಾಟಗಳಿಗೆಲ್ಲ ಸತ್ಯಾಗ್ರಹ ಎಂದೇ ಹೆಸರಿಟ್ಟರು. ಭಾರತ ದೊಡ್ಡ ರಾಷ್ಟ್ರವಾಗಿದ್ದು, ಮೂರು ಸಾವಿರ ವರ್ಷದ ಪರಂಪರೆಯನ್ನು ಹೊಂದಿದೆ. ನೀವು ಬಂದು ಯುದ್ಧ ಮಾಡಿ ಗೆದ್ದಿದ್ದೀರಿ. ಆದರೆ, ನಮ್ಮನ್ನು ಸಾರ್ವಕಾಲಿಕವಾಗಿ ಆಳುವ ಹಕ್ಕು ನಿಮಗಿಲ್ಲವೆಂದು ಬ್ರಿಟಿಷರಿಗೂ ಸತ್ಯವನ್ನು ಅರ್ಥಮಾಡಿಸಿದರು ಎಂದು ಹೇಳಿದರು.
ಸತ್ಯಾಗ್ರಹ ಎನ್ನುವುದು ನಮ್ಮಲ್ಲಿರುವ ಎಲ್ಲ ತೊಂದರೆ, ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ನಂಬಿದ್ದರು. ತಮ್ಮ ವಿಚಾರಧಾರೆಯಲ್ಲಿ ಎಲ್ಲ ಧರ್ಮದ ಸಾರವನ್ನು ಅರ್ಥೈಸಿಕೊಂಡು, ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಗಾಂಧಿ ಮಾರ್ಗವನ್ನು ಮುನ್ನಡೆಸಿಕೊಂಡು ಹೋಗಿದ್ದರು. 1914 ರಿಂದ 1948ರವರೆಗೆ ವೈಚಾರಿಕತೆಯ ಪರಿಕಲ್ಪನೆಯ ಮೇಲೆ ಸಮಾಜ ಹೇಗಿರಬೇಕೆಂಬ ಕನಸನ್ನು ಕಂಡಿದ್ದಂತಹ ಮಹಾನ್ ವ್ಯಕ್ತಿಯಾಗಿದ್ದರು. ಗಾಂಧೀಜಿ ಸುಲಭವಾಗಿ ಯಾರಿಗೂ ಅರ್ಥವಾಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳುವ ಮೊದಲು ಭಾರತದ ಇತಿಹಾಸ, ಪರಂಪರೆಯನ್ನು ಓದಿಕೊಂಡಿರಬೇಕು. 1914 ರಿಂದ 1948ರ ಕಾಲಘಟ್ಟವನ್ನು ತಿಳಿದಿರಬೇಕು. ವಿಶ್ವದ ಎಲ್ಲ ಧಾರ್ಮಿಕ ಪರಂಪರೆ, ಇತಿಹಾಸವನ್ನು ಅರ್ಥೈಸಿಕೊಂಡಿರಬೇಕು. ಇವೆಲ್ಲವನ್ನೂ ಗಾಂಧೀಜಿ ಅವರ ಕಾಲಘಟ್ಟದಲ್ಲಿರಿಸಿ ಜತೆಗೂಡಿಸಿಕೊಂಡಾಗ ನಮಗೆ ಅರ್ಥವಾಗುತ್ತಾರೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟು ಹೋಗುವಾಗ ನಮ್ಮ ಭಾರತದ ಬಗ್ಗೆ ಹೀಯಾಳಿಸಿ ಆಳುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಹೇಳಿ ಹೋಗುತ್ತಾರೆ. ಅದನ್ನು ಇಂದು ಸುಳ್ಳು ಮಾಡಿದ್ದೇವೆ. ಆದರೆ ಗಾಂಧಿ ತತ್ವವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳುವಲ್ಲಿ ಸೋತಿದ್ದೇವೆ. ಗಾಂಧಿ ತತ್ವಗಳು ವರ್ತಮಾನಕ್ಕಲ್ಲ, ಅದು ಭವಿಷ್ಯಕ್ಕೂ ಅವಶ್ಯಕತೆ ಇದೆ. ಸರಳತೆ, ಸ್ವಾವಲಂಬನೆ, ಶಾಂತಿ ಹಾಗೂ ಸಹನೆ ಎಲ್ಲವನ್ನೂ ನಾವು ಗಾಂಧೀಜಿ ಅವರಿಂದ ಕಲಿಯಬಹುದು. ಆದ್ದರಿಂದ ಗಾಂಧಿ ತತ್ವ ಪರಿಪಾಲನೆ ಮಾಡೋಣ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್ ಮಾತನಾಡಿ, ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸೆಯನ್ನು ನಿತ್ಯಸಚಿವ ಕೆ.ವಿ.ಶಂಕರಗೌಡ ಅವರು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಜೀವನಕ್ಕೆ ಬರುತ್ತಾರೆ. ಆ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ವಿದ್ಯಾರ್ಥಿಗಳಿಗೆ ನೆರವಾಗುತ್ತಾರೆ ಎಂದರು.
‘ಗಾಂಧೀಜಿ ಮತ್ತು ಶಿಕ್ಷಣ’ ಕುರಿತ ವಿಷಯ ಮಂಡಿಸಿದ ರಾಜ್ಯ ಸಂಪನ್ಮೂಲ ಕೇಂದ್ರದ ನಿವೃತ್ತ ನಿರ್ದೇಶಕ ಎಸ್.ತುಕಾರಾಂ, ಕೆಲವರು ಗಾಂಧೀಜಿ ಅವರನ್ನು ಏಕೆ ಓದಬೇಕು ಎನ್ನುತ್ತಾರೆ. ವೈಯಕ್ತಿಕವಾಗಿ ಹೊಣೆಗಾರಿಕೆ ಅರಿಯಲು, ಸಾಮೂಹಿಕ ಜವಾಬ್ದಾರಿಯಲ್ಲಿ ಕೃತಜ್ಞತೆ ಇಟ್ಟುಕೊಳ್ಳಲು, ಸಾಮಾಜಿಕ ಸಂಬಂಧಗಳನ್ನ ಕಾಪಾಡಿಕೊಳ್ಳಲು, ಸ್ವಾಭಿಮಾನದಿಂದ ಬದುಕಲು, ಯಾವುದೇ ಜಾತಿ ಧರ್ಮ ಎನ್ನದೇ ಸಹಿಷ್ಣುತೆಯಿಂದ ಬದುಕುವುದಕ್ಕೆ ಹಾಗೂ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ಸಿಗಬೇಕೆಂಬುದನ್ನು ತಿಳಿದುಕೊಳ್ಳಲು ಎಂದು ಪ್ರತಿಪಾದಿಸಿದರು.
ಹಿರಿಯ ಸಾಹಿತಿ ಡಾ.ರಾಗೌ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಇತರರಿದ್ದರು.