

ಮಂಡ್ಯ: ಯಾವುದೇ ಸಮಸ್ಯೆ, ಕಷ್ಟಗಳಿಗೆ ಆತ್ಮಹತ್ಯೆಯೊಂದೇ ಅಂತಿಮ ಪರಿಹಾರವಲ್ಲ ಎಂದು ನರರೋಗ ಮತ್ತು ಮಾನಸಿಕ ತಜ್ಞ ಡಾ.ಅನಿಲ್ ಆನಂದ್ ಹೇಳಿದರು.
ನಗರದ ಬಿಎಲ್‌ಎಸ್ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಆತ್ಮಹತ್ಯೆ ತಡೆಗಟ್ಟುವಲ್ಲಿ ಯುವಜನರ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಎದುರಾಗುವ ಕಷ್ಟಗಳು, ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಾಗ ಆತ್ಮಹತ್ಯೆಯಂತಹ ಆಲೋಚನೆಗಳು ಸುಳಿಯುವುದಿಲ್ಲ. ಮಾನಸಿಕವಾಗಿ ಸಬಲರಾಗಬೇಕು. ಆತ್ಮಸ್ಥೈರ್ಯದಿಂದ ಬದುಕನ್ನು ಕಟ್ಟಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಸಮಸ್ಯೆಗಳು ಎದುರಾದಾಗ ಎದೆಗುಂದಬಾರದು. ಮಾನಸಿಕವಾಗಿ ಕುಗ್ಗದೆ ಅದನ್ನು ಸಮರ್ಥವಾಗಿ ಎದುರಿಸುವ ಬುದ್ಧಿವಂತಿಕೆಯನ್ನು ಪ್ರದರ್ಶಿಸುವವರು ಆತ್ಮಹತ್ಯೆಗೆ ಎಂದಿಗೂ ಶರಣಾಗಲಾರರು ಎಂದು ತಿಳಿಸಿದರು.
ವ್ಯಕ್ತಿತ್ವದ ನ್ಯೂನತೆ, ಖಿನ್ನತೆ, ಕೀಳರಿಮೆ, ಮಾದಕ ವ್ಯಸನಗಳು, ಸಂಬಂಧಗಳಲ್ಲಾಗುವ ಬಿರುಕುಗಳು, ಭಾವಾತಿರೇಕಗಳು, ದುಡುಕು, ಕೋಪ ಆತ್ಮಹತ್ಯೆಗೆ ಪ್ರಮುಖ ಕಾರಣಗಳಾಗಿವೆ. ಆತ್ಮಹತ್ಯೆಗೆ ಪ್ರಯತ್ನಿಸುವವರಿಗೂ ಸಾಯುವ ಬಯಕೆ ಇರುವುದಿಲ್ಲ. ಏನನ್ನೋ ತಿಳಿಸಲು ಬಯಸುವ ಮಾರ್ಗವಾಗಿ ಆತ್ಮಹತ್ಯೆ ಪ್ರಯತ್ನ ನಡೆಸುತ್ತಾರೆ. ಕೆಲವೊಮ್ಮೆ ಅದು ಸಾವಿನಲ್ಲಿ ಕೊನೆಗೊಳ್ಳುತ್ತದೆ. ಮಾನಸಿಕವಾಗಿ ವಿಮುಖನಾದ, ಆತ್ಮಹತ್ಯೆ ಬಯಕೆ ಮತ್ತು ಪ್ರಯತ್ನ ನಡೆಸುವವರನ್ನು ಗುರುತಿಸಿ ಅಂತಹವರಿಗೆ ಆತ್ಮಸ್ಥೈರ್ಯ ತುಂಬಿ ಚಿಕಿತ್ಸೆ ಕೊಡಿಸಿದರೆ ಆತ್ಮಹತ್ಯೆಗಳನ್ನು ತಡೆಯಬಹುದು. ಯುವಜನರು ಸಾಮಾಜಿಕ ಜಾಲತಾಣಗಳು, ಅಪರಾಧ ಚಟುವಟಿಕೆಗಳ ವೈಭವೀಕರಣಗಳಿಂದ ಆತ್ಮಹತ್ಯೆಯ ಕಡೆ ಮುಖ ಮಾಡುತ್ತಾರೆ ಎಂದು ಹೇಳಿದರು.
ವಿದ್ಯಾರ್ಥಿ ಜೀವನದಲ್ಲಿ ಏಳು-ಬೀಳು ಸಾಮಾನ್ಯ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯಲ್ಲಿ ಫೇಲಾದಾಕ್ಷಣ ಜೀವನ ಅಲ್ಲಿಗೆ ಮುಗಿದುಹೋಯಿತು ಎಂದು ಭಾವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಬಾರದು. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿಸಿಕೊಳ್ಳಬೇಕು. ಶಿಕ್ಷಣ ಜ್ಞಾನವನ್ನು ನೀಡುತ್ತದೆ. ಆ ಜ್ಞಾನವನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳುವುದು ಮುಖ್ಯ. ಶಿಕ್ಷಣದಲ್ಲಿ ಯಶಸ್ಸನ್ನು ಕಾಣಲಾಗದ ಎಷ್ಟೋ ಜನ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ. ಅಂತಹವರ ಬದುಕು ಮಾದರಿಯಾಗಬೇಕು ಎಂದು ತಿಳಿಸಿದರು.
ಕಾಲೇಜಿನ ಛೇರ‌್ಮನ್ ಕಾರ್ತಿಕ್, ಪ್ರಾಂಶುಪಾಲ ತೇಜಸ್ವಿ, ಚಂಪಕಲಾ, ಕುಲ್ಸಮ್, ತಾರಾಶ್ರೀ ಇದ್ದರು.