

ಮೈಸೂರು: ಗಾಂಧಿ ಎಂದರೆ ಚರಕ ನೆನಪಾಗುತ್ತದೆ. ಚರಕ ಕೇವಲ ನೆನಪಾಗಬಾರದು, ಸ್ವಾವಲಂಬನೆಯ ಸಂಕೇತವಾದ ಆ ಪರಂಪರೆಯನ್ನು ಉಳಿಸಿಕೊಳ್ಳಬೇಕಿದೆ. ಅಂತೆಯೆ, ಶಕ್ತಿಧಾಮದ ಮಕ್ಕಳ ಸಾಧನೆ ಮತ್ತು ಗಾಂಧಿಯನ್ನು ಅರ್ಥೈಸಿಕೊಂಡಿರುವ ರೀತಿ ಸಂತೋಷ ನೀಡಿದೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದರು.
ನಗರದ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವಾದ ಶಕ್ತಿಧಾಮದಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನೂ ಚರಕದಿಂದ ನೂಲು ತೆಗೆಯಲು ನಿತ್ಯ ಒಂದು ಗಂಟೆ ಮೀಸಲಿಡಲು ತೀರ್ಮಾನಿಸಿರುವೆ. ನಟ ಕೆ.ಜೆ.ಸಚ್ಚಿದಾನಂದ ಅವರು ಚರಕದ ಮೂಲಕ ನಮ್ಮ ಮಕ್ಕಳಿಗೆ ಒಳ್ಳೆಯ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ.
ಮಕ್ಕಳಲ್ಲಿದ್ದ ಆತ್ಮವಿಶ್ವಾಸ, ಕೌಶಲವನ್ನು ಪರಿಚಯಿಸಿದೆ. ವ್ಯಕ್ತಿತ್ವ ರೂಪಿಸಿಕೊಳ್ಳುವ, ಸಾಧನೆ ಮಾಡುವ ಶಕ್ತಿ ಹಾಗೂ ಪ್ರೀತಿ ನಮ್ಮ ಮಕ್ಕಳಿಗೆ ಎಲ್ಲರಿಂದಲೂ ಬರಲಿ ಎಂದು ಆಶಿಸಿದರು.
ನೂಲು ತೆಗೆಯುವಾಗ ದಾರ ಕಿತ್ತು ಹೋಗುವುದು ಸಾಮಾನ್ಯ. ಅದು ನಮ್ಮ ತಾಳ್ಮೆ, ಸಂಯಮ ಬೇಡುತ್ತದೆ. ಬೇಸರವಾದಾಗ ಚರಕದಿಂದ ನೂಲು ತೆಗೆಯುತ್ತಿದ್ದರೆ ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ನಾವೇ ತಯಾರಿಸಿದ ನೂಲು, ಬಟ್ಟೆಯಾಗಿ ಧರಿಸಿದಾಗ ಆಗುವ ಸಂತೃಪ್ತಿ ವರ್ಣಿಸಲು ಆಗದು ಎಂದರು.
ಸಂತ ಕಬೀರ ಪಾತ್ರವನ್ನು ಡಾ.ರಾಜ್‌ಕುಮಾರ್ ಮಾಡಿದ್ದರು. ನಾನು ಸಂತೆಯಲ್ಲಿ ನಿಂತ ಕಬೀರ ಚಿತ್ರದಲ್ಲಿ ನಟಿಸಿದ್ದೆ. ನಾವು ತೆಗೆದ ನೂಲು ಮತ್ತೊಬ್ಬರಿಗೆ ಉದ್ಯೋಗ ನೀಡುತ್ತದೆ ಎಂದು ಹೇಳಿದರು.
ಜನಪದ ಸೇವಾ ಟ್ರಸ್ಟ್‌ನ ಸಂತೋಷ್ ಕೌಲಗಿ ಮಾತನಾಡಿ, ಶಕ್ತಿಧಾಮದ ಮಕ್ಕಳು ಗಾಂಧಿಯನ್ನು ಚರಕದ ಮೂಲಕ ನೋಡಿದ್ದಾರೆ. ಇದು ಸಂತೋಷದ ಬೆಳವಣಿಗೆ. ನಟ ಶಿವರಾಜ್‌ಕುಮಾರ್ ಅಸಲಿ ಖಾದಿ ಉತ್ಪನ್ನಗಳ ಸಾಂಸ್ಕೃತಿಕ ರಾಯಭಾರಿಯಾಗಬೇಕು. ರೈತರು, ನೇಕಾರರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.
ಶಕ್ತಿಧಾಮ ಸಂಸ್ಥೆಯ ಅಧ್ಯಕ್ಷೆ ಗೀತಾ ಶಿವರಾಜ್‌ಕುಮಾರ್, ಪುಣೆಯ ಹಿರಿಯ ನೂಲುಗಾರ ಮಾಧವ ಸಹಸ್ರಬುದ್ಧೆ, ‘ತುಲಾ’ ಖಾದಿ ಸಂಸ್ಥೆಯ ಸಂಸ್ಥಾಪಕ ಅನಂತ ಶಯನ, ಸೂಫಿ ಗಾಯಕ ಮೀರ್ ಮುಖ್ತಿಯಾರ್ ಅಲಿ, ನಟ ಕೆ.ಜೆ.ಸಚ್ಚಿದಾನಂದ, ಲೇಖಕ ಉದಯ್ ಗಾಂವ್ಕರ್, ಟ್ರಸ್ಟಿಗಳಾದ ಸದಾನಂದ, ಚೇತನ್, ಸೌಮ್ಯಾ, ಶಕ್ತಿಧಾಮದ ನಿರ್ದೇಶಕಿ ಮಂಜುಳಾ, ಮೈಸೂರು ನೂಲುಗಾರರ ಬಳಗದ ಅಭಿಲಾಷ್ ಇನ್ನಿತರರು ಪಾಲ್ಗೊಂಡಿದ್ದರು.
ಶಕ್ತಿಧಾಮ’ದ ಮಕ್ಕಳು ಚರಕದಿಂದ ತೆಗೆದ ನೂಲಿನಿಂದ ತಯಾರಾದ ಖಾದಿ ಬಟ್ಟೆಯನ್ನು ಶಕ್ತಿಧಾಮದ ಟ್ರಸ್ಟಿ, ನಟ ಶಿವರಾಜ್ ಕುಮಾರ್ ಸ್ವೀಕರಿಸಿದರು. ಶಕ್ತಿಧಾಮ ಶಾಲೆಯ 9ನೇ ತರಗತಿಯ 25 ಮಕ್ಕಳು 4 ತಿಂಗಳಿಂದ ಚರಕದಿಂದ ದಾರ ತೆಗೆದಿದ್ದರು.
ಇದರಿಂದ 320 ಮೀಟರ್ ಬಟ್ಟೆಯನ್ನು ಮೇಲುಕೋಟೆಯ ನೇಕಾರರು ತಯಾರಿಸಿದ್ದರು. ಈ ಖಾದಿ ಬಟ್ಟೆಯನ್ನು ಮಕ್ಕಳು ಶಿವರಾಜ್‌ಕುಮಾರ್‌ಗೆ ಉಡುಗೊರೆಯಾಗಿ ನೀಡಿದರು.