

ಜಗಳೂರು: ಅಂಬೇಡ್ಕರ್ ಒಂದು ಸಮುದಾಯಕ್ಕಾಗಿ ದುಡಿದವರಲ್ಲ. ಈ ದೇಶದ ಪ್ರತಿಯೊಬ್ಬ ಪ್ರಜೆಗಾಗಿ ತಮ್ಮ ಬದುಕನ್ನು ಸವೆಸಿದ್ದಾರೆ ಎಂದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಹೇಳಿದರು.
ವಾಲ್ಮೀಕಿ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲೇ ಅತಿದೊಡ್ಡ ಸಂವಿಧಾನ ರಚಿಸಿದ ಅಂಬೇಡ್ಕರ್ ಪ್ರತಿ ಭಾರತೀಯನಿಗೂ ಆದರ್ಶವಾಗಿದ್ದಾರೆ. ಜ್ಞಾನದ ಸಂಕೇತವಾಗಿ ಇಡೀ ವಿಶ್ವವೇ ಅವರ ಜನ್ಮದಿನ ಆಚರಿಸುತ್ತಿದೆ ಎಂದರು.
ನಾಲಂದ ಕಾಲೇಜಿನ ಪ್ರಾಚಾರ್ಯ ಬಿ.ಎನ್.ಎಂ. ಸ್ವಾಮಿ ಮಾತನಾಡಿ, ಅಂಬೇಡ್ಕರ್ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿದ್ದಾರೆ. 33ಕ್ಕೂ ಅಧಿಕ ಪದವಿಗಳನ್ನು ಪಡೆದ ದೇಶದ ಮೊದಲ ಜ್ಞಾನಿ ಎನಿಸಿದ್ದಾರೆ ಎಂದರು.
ಶಿಕ್ಷಕಿ ಆರ್. ರಾಣಿ ಉಪನ್ಯಾಸ ನೀಡಿದರು. ತಾಪಂ ಇಒ ಕೆಂಚಪ್ಪ, ಬಿಇಒ ಹಾಲಮೂರ್ತಿ, ನೌಕರರ ಸಂಘದ ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಸಧ್ಯಕ್ಷ ಶಂಷೀರ್ ಅಹಮದ್, ಶಂಭುಲಿಂಗಪ್ಪ, ಪರಮೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಪಪಂ ಸದಸ್ಯರಾದ ದೇವರಾಜ್, ಲಲಿತಾ, ಪಾಪಲಿಂಗಪ್ಪ, ನಾಮ ನಿರ್ದೇಶನ ಸದಸ್ಯ ಕುರಿ ಜಯಣ್ಣ, ಕಸಾಪ ತಾಲೂಕಾಧ್ಯಕ್ಷೆ ಸುಜಾತಮ್ಮ, ಬಸವರಾಜ್, ಪೂಜಾರಿ ಸಿದ್ದಪ್ಪ, ದಸಂಸ ಸಂಚಾಲಕ ಸತೀಶ್ ಮಲೆಮಾಚಿಕೆರೆ, ಕುಬೇರಪ್ಪ ಸೇರಿದಂತೆ ಮತ್ತಿತರರಿದ್ದರು.
ಸಾಗಿದ ಭವ್ಯ ಮೆರವಣಿಗೆ : ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿಯ ಪುತ್ಥಳಿಗೆ ಮಾಲಾರ್ಪಣೆ ನಂತರ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರವಿದ್ದ ಬೆಳ್ಳಿ ರಥದ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯು ಹೊಸ ಬಸ್ ನಿಲ್ದಾಣ, ಮಹಾತ್ಮಗಾಂಧಿ ಹಳೇ ವೃತ್ತ, ಪ್ರವಾಸಿ ಮಂದಿರ ರಸ್ತೆ ಮಾರ್ಗವಾಗಿ ವಾಲ್ಮೀಕಿ ಭವನದ ವೇದಿಕೆಗೆ ಸಾಗಿತು. ದಾರಿಯುದ್ದಕ್ಕೂ ಡೊಳ್ಳು ಕುಣಿತ ಹಾಗೂ ವಿವಿಧ ವಾದ್ಯಗಳು ಸಾಥ ನೀಡಿದವು.
ಇದೇ ವೇಳೆ ಜ್ಯೋತಿಪರು ಗ್ರಾಮದ ಕಿರಿಯ ವಿಜ್ಞಾನಿ ಪ್ರವೀಣ್ ಅವರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.