

ಹುಬ್ಬಳ್ಳಿ : ಮುಂಬೈನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಲ್ ಇಂಡಿಯಾ ರೈಲ್ವೆ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ 2024-25ರಲ್ಲಿ ಸೌಥ್ ವೆಸ್ಟರ್ನ್ ವೇಟ್ಲಿಫ್ಟಿಂಗ್ ಅಸೋಸಿಯೇಷನ್ (ಎಸ್ಡಬ್ಲುಆರ್ಎಸ್ಎ) ಸತತ ಎರಡನೇ ಬಾರಿ ಗೆಲುವು ಸಾಧಿಸಿದೆ.
ನೈಋತ್ಯ ರೈಲ್ವೆಯ ಪ್ರಭು 73 ಕೆಜಿ ವಿಭಾಗದಲ್ಲಿ ಚಿನ್ನದ ಪದಕ, 93 ಕೆಜಿ ವಿಭಾಗದಲ್ಲಿ ದಿಲ್ಶಾದ್ ಹುಸೇನ್ ಚಿನ್ನದ ಪದಕ ಪಡೆದುಕೊಂಡರು. ಅಭಿಷೇಕ ಹೊರಕೇರಿ ಅತಿ ಹೆಚ್ಚು ಭಾರ ಎತ್ತುವ ವಿಭಾಗದ 120 ಪ್ಲಸ್ ಕೆಜಿಯಲ್ಲಿ ಚಿನ್ನ ಪಡೆಯುವ ಜತೆಗೆ 1112.5ಕೆಜಿ ಎತ್ತುವ ಮೂಲಕ ಹೊಸ ದಾಖಲೆ ನಿರ್ವಿುಸಿದರು.
ಇದರೊಂದಿಗೆ ಶಂಕುಕೃಪಾ ರಾವ್ ಅವರು 83 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ, 93 ಮತ್ತು 105 ಕೆಜಿ ವಿಭಾಗದಲ್ಲಿ ಕ್ರಮವಾಗಿ ಇ. ಎಳಸವರನ್ ಮತ್ತು ಸೂರಜಕುಮಾರ ಸಿಂಗ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಇಲ್ಲಿನ ಗದಗ ರಸ್ತೆಯ ರೈಲ್ ಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವತ್ಸ ಅವರು ಪದಕ ವಿಜೇತರನ್ನು ಸನ್ಮಾನಿಸಿದರು.