ರೈಲ್ವೆ ಟಿಕೆಟ್ ರಹಿತ ಪ್ರಯಾಣಿಕರಿಂದ 46.31 ಕೋಟಿ ರೂ. ದಂಡ ಸಂಗ್ರಹ

SWR NEWSSS
Published on

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯವು ಟಿಕೆಟ್ ರಹಿತ ಪ್ರಯಾಣದ 6,27,014 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ಹಣಕಾಸು ವರ್ಷದಲ್ಲಿ 2023ರ ಡಿಸೆಂಬರ್​ವರೆಗೆ 46.31 ಕೋಟಿ ರೂ.ಗಳ ದಂಡ ಸಂಗ್ರಹಿಸಿದೆ.

ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು 3,68,205 ಪ್ರಕರಣಗಳನ್ನು ದಾಖಲಿಸಿ, 28.26 ಕೋಟಿ ರೂ.ಗಳ ದಂಡ ಸಂಗ್ರಹ ಮಾಡಿದೆ.

ವಲಯದ ಟಿಕೆಟ್ ತಪಾಸಣಾ ಸಿಬ್ಬಂದಿ ಈ ಹಣಕಾಸು ವರ್ಷದ 2023 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ಉತ್ತಮ ಕೆಲಸ ಮಾಡಿದ್ದಾರೆ. ಟಿಕೆಟ್ ರಹಿತ ಮತ್ತು ಅನಿಯಮಿತ ಪ್ರಯಾಣವನ್ನು ತಡೆಯಲು ಎಕ್ಸ್​ಪ್ರೆಸ್, ವಿಶೇಷ ರೖಲುಗಳು ಸೇರಿದಂತೆ ಪ್ರಯಾಣಿಕರ ರೈಲು ಸೇವೆಗಳಲ್ಲಿ ಎಲ್ಲ ಅಧಿಕೃತ ರೈಲು ಬಳಕೆದಾರರಿಗೆ ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ವಿಶೇಷ ಟಿಕೆಟ್ ತಪಾಸಣಾ ಕಾರ್ಯವನ್ನು ಸದಾ ನಿಯಮಿತವಾಗಿ ನಡೆಸಲಾಗುತ್ತಿದೆ.

ಈ ಹಣಕಾಸು ವರ್ಷದಲ್ಲಿ ಸಂಗ್ರಹಿಸಿದ ದಂಡದ ಮೊತ್ತವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 9.95 ರಷ್ಟು ಹೆಚ್ಚಳವಾಗಿದೆ. ಇದು ನೈಋತ್ಯ ರೖಲ್ವೆ ಪ್ರಾರಂಭವಾದಾಗಿನಿಂದ ಅತಿ ಹೆಚ್ಚು ದಂಡ ವಸೂಲಿ ಆಗಿದೆ.

2023 ರ ಡಿಸೆಂಬರ್​ನಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ 72,041 ಪ್ರಕರಣಗಳನ್ನು ದಾಖಲಿಸಿ 5.13 ಕೋಟಿ ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಅವರು ಟಿಕೆಟ್ ತಪಾಸಣೆಯ ಉತ್ತಮ ಪ್ರಯತ್ನಗಳಿಗಾಗಿ ಟಿಕೆಟ್ ತಪಾಸಣೆ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಕ್ಸ್ :

2023ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ನೈಋತ್ಯ ರೈಲ್ವೆ ವಿವಿಧ ವಿಭಾಗವಾರು ದಂಡ ಸಂಗ್ರಹವು ಈ ಕೆಳಗಿನಂತಿದೆ:

* ಹುಬ್ಬಳ್ಳಿ ವಿಭಾಗವು 96,790 ಪ್ರಕರಣಗಳನ್ನು ದಾಖಲಿಸಿ, 6.36 ಕೋಟಿ ರೂ.ಗಳ ದಂಡ ಸಂಗ್ರಹಿಸಿದೆ.

* ಬೆಂಗಳೂರು ವಿಭಾಗವು 3,68,205 ಪ್ರಕರಣಗಳನ್ನು ದಾಖಲಿಸಿ, 28.26 ಕೋಟಿ ರೂ.ಗಳ ದಂಡ ಸಂಗ್ರಹಿಸಿದೆ.

* ಮೈಸೂರು ವಿಭಾಗವು 1,00,538 ಪ್ರಕರಣಗಳನ್ನು ದಾಖಲಿಸಿ, 5.91 ಕೋಟಿ ರೂ.ಗಳ ದಂಡ ಸಂಗ್ರಹಿಸಿದೆ.

* ಫ್ಲೈಯಿಂಗ್ ಸ್ಕ್ವಾಡ್ (ಕೇಂದ್ರ ಕಚೇರಿ) ವಿಭಾಗವು 61,481 ಪ್ರಕರಣಗಳನ್ನು ದಾಖಲಿಸಿ, 5.77 ಕೋಟಿ ರೂ.ಗಳ ದಂಡ ಸಂಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net