ಅಗ್ನಿ ಸುರಕ್ಷತೆ ಜಾಗೃತಿ ಅಭಿಯಾನ

fire safety
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಅಗ್ನಿ ಅವಘಡಗಳು ಸಂಭವಿಸದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ನವೆಂಬರ್ ತಿಂಗಳಲ್ಲಿ ಅಗ್ನಿ ಸುರಕ್ಷತೆ ಜಾಗೃತಿ ಅಭಿಯಾನ ನಡೆಸಿದೆ.

ರೈಲ್ವೆ ಪ್ರಯಾಣಿಕರು, ರೈಲು ನಿಲ್ದಾಣ ಮತ್ತು ರೈಲಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಇತರರಿಗೆ ತಿಳಿವಳಿಕೆ ನೀಡಲಾಗಿದೆ. ಇಲ್ಲಿಯವರೆಗೆ 200 ರೈಲುಗಳಲ್ಲಿ ಅಭಿಯಾನ, 75ಕ್ಕೂ ಹೆಚ್ಚು ರೈಲುಗಳಲ್ಲಿ ಸುರಕ್ಷಾ ತಪಾಸಣೆ, 8 ಸಾವಿರ ಪ್ರಯಾಣಿಕರೊಂದಿಗೆ ನೇರವಾಗಿ ಸಮಾಲೋಚನೆ ನಡೆಸಲಾಗಿದೆ. 22 ಸಾವಿರ ರೂ. ಮೌಲ್ಯದ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ಉಪಕರಣಗಳನ್ನು ಪ್ರಾಯೋಗಿಕವಾಗಿ ಬಳಸುವ, ರೈಲು ಬೋಗಿಯ ತುರ್ತು ನಿರ್ಗಮನ ಕಿಟಕಿಗಳನ್ನು ತೆರೆಯುವ ಹಾಗೂ ಪಟಾಕಿ ಮತ್ತು ಸ್ಪೋಟಕ ವಸ್ತುಗಳನ್ನು ಸಾಗಿಸುವ ಪ್ರಯಾಣಿಕರ ಬಗ್ಗೆ ಮಾಹಿತಿ ನೀಡುವ, ಇತ್ಯಾದಿ ವಿಷಯಗಳ ಕುರಿತು ರೈಲ್ವೆ ಸಿಬ್ಬಂದಿ ಹಾಗೂ ಜನಸಾಮಾನ್ಯರಿಗೆ ಅರಿವು ಮೂಡಿಸಲಾಯಿತು.

ಪ್ರಯಾಣಿಕರು ತಮ್ಮೊಂದಿಗೆ ಪಟಾಕಿ, ಇನ್ನಿತರ ದಹನಕಾರಿ ವಸ್ತುಗಳನ್ನು ರೈಲಿನಲ್ಲಿ ಸಾಗಿಸಬಾರದು. ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ಕೆರೊಸಿನ್, ಸ್ಟೋವ್ಸ್, ಬೆಂಕಿ ಪೊಟ್ಟಣ, ಸಿಗರೇಟ್ ಲೈಟರ್​ಗಳನ್ನು ಪಾರ್ಸೆಲ್ ಬುಕ್ಕಿಂಗ್ ಮೂಲಕ ಕಳುಹಿಸುವ ಹಾಗಿಲ್ಲ ಎಂದು ನೈಋತ್ಯರೈಲ್ವೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net