ಶೈಕ್ಷಣಿಕ ಪ್ರಗತಿಗೆ ವಿದ್ಯಾರ್ಥಿ, ಉದ್ಯೋಗಮಿತ್ರ ಪೂರಕ : ಪಾವಗಡ ರಾಮಕೃಷ್ಣ ವಿವೇಕಾನಂದ ಸೇವಾಶ್ರಮದ ಡಾ.ಜಪಾನಂದಜೀ ಸಲಹೆ

25TMK_JapanandaJi_Pavgada
Published on

ಪಾವಗಡ; ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ರೂಪಿಸಿರುವ ವಿಜಯವಾಣಿ ವಿದ್ಯಾರ್ಥಿ, ಉದ್ಯೋಗ ಮಿತ್ರ ಎಲ್ಲ ವಿದ್ಯಾರ್ಥಿಗಳಿಗೆ ಸದಾ ಜತೆಗಿರುವ ಮಿತ್ರನಾಗಬೇಕು ಎಂದು ಪಾವಗಡ ರಾಮಕೃಷ್ಣ ವಿವೇಕಾನಂದ ಸೇವಾಶ್ರಮದ ಡಾ.ಜಪಾನಂದಜೀ ಹೇಳಿದರು.

ಪಾವಗಡ ಸರ್ಕಾರಿ ಪಿಯು ಕಾಲೇಜಿನಲ್ಲಿ, ಸರ್ಕಾರಿ ಮಹಿಳಾ ಪಿಯು ಕಾಲೇಜು ಮತ್ತು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದಿಂದ ಮಂಗಳವಾರ ಆಯೋಜಿಸಿದ್ದ ವಿಜಯವಾಣಿ ವಿದ್ಯಾರ್ಥಿ/ಉದ್ಯೋಗ ಮಿತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಪಾವಗಡದಂತಹ ಗಡಿ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಷ್ಟದಲ್ಲಿಯೂ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ, ಈ ಎಲ್ಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿ ವಿಜಯವಾಣಿ ಸಂಗ್ರಹಯೋಗ್ಯ ಸಂಚಿಕೆ ರೂಪಿಸಿದ್ದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಹುತೇಕ ತಂದೆ, ತಾಯಿ ಕಷ್ಟಪಟ್ಟು ತಮ್ಮ ಮಕ್ಕಳನ್ನು ಶಾಲೆ, ಕಾಲೇಜುಗಳಲ್ಲಿ ಓದಿಸುತ್ತಿದ್ದು ಸಾಧನೆ ಮಾಡಿ ಹೆಸರು ತರಬೇಕು. ಎಲ್ಲ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಪೂರಕವಾಗಿರುವ ವಿದ್ಯಾರ್ಥಿಮಿತ್ರ ಪ್ರತಿದಿನ ಓದಬೇಕು ಎಂದರು. ದೇಶದಲ್ಲಿ ಸಾಕಷ್ಟು ಮಹನೀಯರು ದೇಶಪ್ರೇಮದ ಮೂಲಕವೇ ನಮಗೆಲ್ಲಾ ಪ್ರೇರಣೆಯಾಗಿದ್ದು ಅವರ ಆದರ್ಶಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಎಲ್ಲರೂ ದೇಶದ ಆಸ್ತಿಯಾಗಬೇಕು, ರಾಜ್ಯವೇ ಪಾವಗಡದ ಕಡೆ ತಿರುಗಿ ನೋಡುವಂತಹ ಸಾಧನೆಯನ್ನು ಮಾಡಬೇಕು ಎಂದರು.

ಪ್ರಾಚಾರ್ಯ ಬಸವಲಿಂಗಪ್ಪ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಕಲಿಯುತ್ತಿರುವ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ವಿಜಯವಾಣಿ ರೂಪಿಸಿರುವ ವಿದ್ಯಾರ್ಥಿಮಿತ್ರ ಸಂಚಿಕೆ ಉದ್ಯೋಗ ಹಾಗೂ ಜೀವನ ಕೌಶಲ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ ಎಂದರು.

ಮಹಿಳಾ ಪಿಯು ಕಾಲೇಜು ಪ್ರಾಚಾರ್ಯ ಮಾರಪ್ಪ ಮಾತನಾಡಿ, ರಾಮಕೃಷ್ಣ ಸೇವಾಶ್ರಮ ಗಡಿಭಾಗ ಪಾವಗಡದಲ್ಲಿ ನಿರಂತರವಾಗಿ ಸೇವೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಡಾ.ಜಪಾನಂದಜೀ ಮಾರ್ಗದರ್ಶನ ಯುವಕರಲ್ಲಿ ಸ್ಫೂರ್ತಿ ಮೂಡಿಸಿದೆ ಎಂದರು. ಸಮಾರಂಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಪ್ರಮೋದ್‌ಕುಮಾರ್, ಉಪನ್ಯಾಸಕರಾದ ಕರಿಯಣ್ಣ, ಸುರೇಶ್‌ಬಾಬು, ತಿಪ್ಪೇಸ್ವಾಮಿ, ಪ್ರಸಾರಾಂಗ ವಿಭಾಗದ ಬಸಣ್ಣ, ಶಶಿಧರ್ ಮತ್ತಿತರರು ಇದ್ದರು.

ರೂಪಿಸಿರುವ ವಿದ್ಯಾರ್ಥಿ, ಉದ್ಯೋಗ ಮಿತ್ರ ಸಂಚಿಕೆ ಸಂಗ್ರಹಯೋಗ್ಯವಾಗಿದ್ದು, ಪ್ರತಿದಿನ ಓದುವ ಜತೆಗೆ ಮನೆಯಲ್ಲಿ ಕಾಪಾಡಿಟ್ಟುಕೊಳ್ಳಬಹುದು, ಪಾವಗಡದಂತಹ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ಎಲ್ಲ ವಿದ್ಯಾರ್ಥಿಗಳು ಸಂಚಿಕೆಯನ್ನು ಜತೆಗಿಟ್ಟುಕೊಳ್ಳಬೇಕು. ಡಾ.ಜಪಾನಂದಜೀ ಮುಖ್ಯಸ್ಥರು, ಪಾವಗಡ ರಾಮಕೃಷ್ಣ ಸೇವಾಶ್ರಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net