

ತುಮಕೂರು ; ವಿದ್ಯಾಭ್ಯಾಸದ ಜತೆಗೆ ಉದ್ಯೋಗ ಕೌಶಲದ ಅಭಿವೃದ್ಧಿಯೇ ನಿರುದ್ಯೋಗ ನಿರ್ಮೂಲನದ ಅಸ್ತ್ರವಾಗಿದ್ದು, ಕೌಶಲ ಅಭಿವೃದ್ಧಿ ಕೇಂದ್ರ ಎಲ್ಲೆಡೆ ತೆರೆಯಬೇಕು ಎಂದು ಚಿತ್ರದುರ್ಗ ಶಿವಶರಣ ಮಾದಾರ ಗುರುಪೀಠದ ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ತುಮಕೂರು ವಿವಿ ಶಿರಾ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸ್ನಾತಕೋತ್ತರ ಕೇಂದ್ರ ಹಾಗೂ ಕನಕ ಜಯಂತಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಸವಲತ್ತು ಹಾಗೂ ಉದ್ಯೋಗಗಳ ಕೊರತೆಯಿಂದ ಗ್ರಾಮೀಣ ಯುವಕರು ನಗರಗಳಿಗೆ ಗುಳೆ ಹೋಗುತ್ತಿದ್ದಾರೆ, ಪಿಎಚ್‌ಡಿ ಮಾಡಿಯೂ ಉದ್ಯೋಗ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಎಲ್ಲಕ್ಕೂ ಕೌಶಲಗಳ ಕೊರತೆಯೇ ಕಾರಣ ಎಂದರು.
ಕಾಲೇಜು ಎಂಬುದು ಜ್ಞಾನದೇಗುಲವಿದ್ದಂತೆ, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೆಡೆಗೆ ನಿಮ್ಮ ದೃಷ್ಟಿ ಇಟ್ಟಿರಬೇಕು, ಜಾತಿ-ಧರ್ಮದ ಎಲ್ಲೆಯನ್ನು ಮೀರಿದವರು ಕನಕದಾಸರು. ಅವರ ಆದರ್ಶ ಮೈಗೂಡಿಸಿಕೊಂಡು ದೇಶದ ಆಸ್ತಿಯಾಗಬೇಕು, ಕನಕದಾಸರು ಸೇರಿ ದಾರ್ಶನಿಕರನ್ನು ಒಂದೇ ಜಾತಿಗೆ ಮೀಸಲು ಮಾಡುವುದು ಬೇಡ, ಅವರ ಆದರ್ಶಗಳನ್ನು ಎಲ್ಲರೂ ಪಾಲಿಸೋಣ ಎಂದರು.
ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಮಾತನಾಡಿ, ಸಮಗ್ರ ಭಾರತದ ಪ್ರಗತಿಗೆ ಗುಣಾತ್ಮಕ ಶಿಕ್ಷಣ ಮುಖ್ಯವಾಗಿದ್ದು, ತುಮಕೂರು ವಿವಿಯ ಶಿರಾ ನಗರದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭಿಸುವ ಮೂಲಕ ಉನ್ನತ ಶಿಕ್ಷಣ ಎಲ್ಲೆಡೆ-ಎಲ್ಲರಿಗಾಗಿ ಎಂಬ ತುಮಕೂರು ವಿವಿಯ ಘೋಷಣೆ ನಿಜವಾಗಿಸಿದೆ ಎಂದರು.
ಜ್ಞಾನವೆಂಬುದು ಪ್ರತಿದಿನ ವೃದ್ಧಿಯಾಗುತ್ತಿರಬೇಕು, ಸಂಕಲ್ಪರಹಿತ ಜೀವನ ಸಾರ್ಥಕ ಬದುಕು ನೀಡುವುದಿಲ್ಲ, ನಾವು ಸಮಸ್ಯೆಗಳನ್ನು ಎದುರಿಸಬೇಕೇ ಹೊರತು ಹೆದರಬಾರದು, ಮೌಲ್ಯದ ಆಧಾರದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿ ನಡೆಯಲಿದೆ ಎಂದರು.
ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ ಸ್ವಾಗತಿಸಿದರು. ಸಿಂಡಿಕೇಟ್ ಸದಸ್ಯ ಹಾಗೂ ಶಿರಾ ಸ್ನಾತಕೋತ್ತರ ಕೇಂದ್ರ ಉದ್ಘಾಟನಾ ಸಮಿತಿ ಅಧ್ಯಕ್ಷ ಆರ್.ಕೆ.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿ ಸಿಂಡಿಕೇಟ್ ಸದಸ್ಯರಾಡ ಟಿ.ಎಸ್.ಸುನೀಲ್‌ಪ್ರಸಾದ್, ರಾಜು, ಕೇಂದ್ರದ ಸಂಯೋಜಕ ಡಾ.ಎಚ್.ಎಸ್.ಬೋರೇಗೌಡ, ಉಪಕುಲಸಚಿವೆ ಡಾ.ಎಂ.ಮಂಗಳಾಗೌರಿ, ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಇದ್ದರು.