

ತುಮಕೂರು : ಜಿಲ್ಲಾ ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್‌ಗೆ ನಗರದ ಕನ್ನಡ ಭವನದಲ್ಲಿ ಸೋಮವಾರ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಬೋರ್‌ವೆಲ್ ಏಜೆಂಟರು ಎಷ್ಟು ಜನರಿದ್ದಾರೆ ಎಂಬುದು ಗೊತ್ತಿರಲಿಲ್ಲ, ಎಲ್ಲರೂ ನೋಂದಾಯಿಸಿಕೊಂಡು ಯಾರ‌್ಯಾರು ಎಲ್ಲೆಲ್ಲಿ ಇದ್ದೇವೆ, ಏನು ಮಾಡುತ್ತಿದ್ದೇವೆ ಎಂಬ ಎಲ್ಲವೂ ಸಂಘದಿಂದ ತಿಳಿಯಲಿದೆ, ಒಗ್ಗಟ್ಟಾಗಿ ದುಡಿಯುವ ಕೆಲಸ ಸಾಗಲಿ ಎಂದು ಶ್ರೀಸಿದ್ದಲಿಂಗ ಸ್ವಾಮೀಜಿ ಆಶೀರ್ವದಿಸಿದರು.
ಮಾಜಿ ಮಂತ್ರಿ ದಿ.ನಜೀರ್‌ಸಾಬ್ ಅವರನ್ನು ಬೋರ್‌ವೆಲ್ ಕೊರೆಯುವವರು ಜ್ಞಾಪಿಸಿಕೊಳ್ಳಬೇಕು, ಅವರು ಮೊದಲಿಗೆ ಬೋರ್‌ವೆಲ್ ಯೋಜನೆ ತಂದು ರೈತರ ಕೃಷಿಗೆ ಮಾತ್ರ ಎಂಬ ನಿಟ್ಟಿನಲ್ಲಿ ಪ್ರಾರಂಭ ಮಾಡಿದರು, ಅಲ್ಲಿಂದ ಬೋರ್‌ವೆಲ್ ಕಾರ್ಯ ದೊಡ್ಡ ಉದ್ಯಮವಾಗಿ ಬೆಳೆದು ಇಂದು ಎಲ್ಲ ಕ್ಷೇತ್ರಗಳಲ್ಲೂ ವಿಸ್ತರಿಸಿಕೊಂಡಿದೆ ಎಂದರು.
ಹಿಂದಿನ ಕಾಲದಲ್ಲಿ ನದಿನೀರು ಬಳಸುತ್ತಿದ್ದರು, ಕೆರೆ, ಕಟ್ಟೆ ನೀರನ್ನು ಬಳಸುತ್ತಿದ್ದರು, ಕಲ್ಯಾಣಿಗಳನ್ನು ತೋಡಿಸುತ್ತಿದ್ದರು, ತೆರೆದ ಬಾವಿಗಳನ್ನು ತೋಡಿಸುತ್ತಿದ್ದರು, ತದನಂತರ ಅನಿವಾರ್ಯವಾಗಿ ಹೊಸ ಆವಿಷ್ಕಾರಗಳು ಬಂದಾಗ ಬೋರ್‌ವೆಲ್ ಸಂಸ್ಕೃತಿ ಬಂದು ಇಂದು ಬೋರ್‌ವೆಲ್ ಕೊರೆಸದಿದ್ದರೆ ನೀರು ಸಿಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಬರಲಾಗಿದೆ ಎಂದು ಹೇಳಿದರು.
ಐಕ್ಯತೆ ಒಂದೇ ಮಂತ್ರ, ಕಲಿಯುಗದಲ್ಲಿ ಸಂಘಟನೆಗೆ ಶಕ್ತಿ ಇರುವಂತಹದ್ದು, ಇಂತಹ ಸಂಘಟನೆಯಿಂದ ಏನೇ ಕೆಲಸ ನಿರ್ವಹಿಸಿದರೂ ಯಶಸ್ಸು ಖಂಡಿತಾ ಸಾಧ್ಯವಾಗಲಿದೆ. ನಿಮ್ಮ ಅಸೋಸಿಯೇಷನ್ ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಆಶಿಸಿದರು.
ಬೋರ್‌ವೆಲ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಮಚಂದ್ರಮೂರ್ತಿ ಮಾತನಾಡಿ, ರೈತರ ಕಷ್ಟಕ್ಕೆ ಸ್ಪಂದಿಸಿ, ಕಡಿಮೆ ದರದಲ್ಲಿ ಬೋರ್‌ವೆಲ್ ಕೊರೆಸಿಕೊಡುವ ಉದ್ದೇಶದಿಂದ ತುಮಕೂರು ಅಸೋಸಿಯೇಷನ್ ಸ್ಥಾಪನೆ ಮಾಡಲಾಗಿದೆ ಎಂದರು.
ಪದಾಧಿಕಾರಿಗಳಾದ ಜಗದೀಶ್, ಬೆಣ್ಣೆ ರಾಜಣ್ಣ, ಅನಿಲ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಗುಬ್ಬಿ ಶಾಸಕ ಎಸ್.ಆರ್.ಶ್ರಿನಿವಾಸ್, ಎಸ್.ಜಗದೀಶ್, ನಗರಸಭಾ ಮಾಜಿ ಸದಸ್ಯ ಡಿ.ಆರ್.ಬಸವರಾಜು, ಮುನಿಯಪ್ಪ, ಮುಖಂಡರಾದ ಕೆ.ಬಿ.ಬೋರೇಗೌಡ, ಸಿದ್ದೇಶ್, ಕೆ.ಸಿ.ನರಸಿಂಹಮೂರ್ತಿ, ಶಂಕರಪ್ಪ, ನರಸಿಂಹರಾಜು ಮತ್ತಿತರರು ಇದ್ದರು.