ಘನತ್ಯಾಜ್ಯ ನಿರ್ವಹಣಾ ಮಂಡಳಿಗೆ ಪ್ರಸ್ತಾವನೆ : ಸರ್ಕಾರಕ್ಕೆ ವಿಸ್ತೃತ ಪ್ರಸ್ತಾವನಾ ವರದಿ

Manjunath Prasad (6)
Published on

ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಪ್ರತ್ಯೇಕ ಘನತ್ಯಾಜ್ಯ ನಿರ್ವಹಣಾ ಮಂಡಳಿ ಅಗತ್ಯವನ್ನು ಮನಗಂಡಿದ್ದ ಬಿಬಿಎಂಪಿ, ಕೌನ್ಸಿಲ್‌ನಲ್ಲಿ ಜನಪ್ರತಿನಿಧಿಗಳಿಲ್ಲದ ವೇಳೆಯೇ ಸರ್ಕಾರಕ್ಕೆ ವಿಸ್ತೃತ ಮಾಹಿತಿಯನ್ನೊಳಗೊಂಡ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.

ನಗರದಲ್ಲಿ ತ್ಯಾಜ್ಯ ನಿರ್ವಹಣೆಗೆ ವಾರ್ಷಿಕವಾಗಿ ಸುಮಾರು 1 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಆದರೆ, ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಯಿಂದ ಪಾಲಿಕೆಗೆ ಕೇವಲ 50 ಕೋಟಿ ರೂ. ಸಂಗ್ರಹವಾಗುತ್ತಿದೆ. ಈ ಅಂತರ ತಗ್ಗಿಸುವ ನಿಟ್ಟಿನಲ್ಲಿ ಹಾಗೂ ತ್ಯಾಜ್ಯ ವಿಲೇವಾರಿ ವೇಳೆ ಉಂಟಾಗುವ ಎಲ್ಲ ಲೋಪಗಳನ್ನು ಸರಿಪಡಿಸಲು ತ್ಯಾಜ್ಯ ನಿರ್ವಹಣಾ ಪ್ರತ್ಯೇಕ ಮಂಡಳಿ ರಚನೆ ಅಗತ್ಯವಾಗಿದೆ. ಪ್ರತ್ಯೇಕ ಮಂಡಳಿ ರಚನೆಯಾದಲ್ಲಿ ಬಿಬಿಎಂಪಿಗೆ ಅತಿದೊಡ್ಡ ನಿರ್ವಹಣಾ ಹೊರೆ ತಗ್ಗಿದಂತಾಗುತ್ತದೆ. ಕಸ ಸಂಗ್ರಹಣೆಗೆ ಪ್ರತ್ಯೇಕ ಶುಲ್ಕ ವಸೂಲಿ, ಸೂಕ್ತ ವಿಲೇವಾರಿ ಮಾಡದ ಗುತ್ತಿಗೆದಾರರ ಮೇಲೆ ಕ್ರಮವಹಿಸಲು ಸಾಧ್ಯವಾಗಲಿದೆ.

ಮುಂದಿನ 10 ದಿನಗಳಲ್ಲಿ ಕನ್ನಳ್ಳಿ ಬಳಿ ಸಾವಿರ ಟನ್ ಸಾಮರ್ಥ್ಯದ ‘ವೇಸ್ಟ್ ಟು ಎನರ್ಜಿ ಪ್ಲ್ಯಾಂಟ್’ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ಈ ಘಟಕದ ನಿರ್ವಹಣೆಗೆ ನುರಿತ ಸಿಬ್ಬಂದಿಯ ಅಗತ್ಯವಿದೆ. ಈ ಸಿಬ್ಬಂದಿ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಮಂಡಳಿಯನ್ನು ರಚಿಸುವ ಕುರಿತು ನ.21ರಂದು ‘ವಿಜಯವಾಣಿ’ ಫೋನ್‌ಇನ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ತಿಳಿಸಿದ್ದ ಮಂಜುನಾಥ ಪ್ರಸಾದ್, ಶೀಘ್ರದಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುವಾಗಿ ಹೇಳಿದ್ದರು.

ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸದಂತೆ ಘನತ್ಯಾಜ್ಯ ನಿರ್ವಾಹಣೆಗಾಗಿ ಪ್ರತ್ಯೇಕ ಮಂಡಳಿ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಡದಿ ಬಳಿ 260 ಕೋಟಿ ರೂ. ವೆಚ್ಚದಲ್ಲಿ ‘ವೇಸ್ಟ್ ಟು ಎನರ್ಜಿ ಪ್ಲ್ಯಾಂಟ್’ಗೆ ಕಳೆದ ವಾರ ಶಂಕುಸ್ಥಾಪನೆ ಮಾಡಲಾಗಿದ್ದು, ತ್ಯಾಜ್ಯದ ಭೂಭರ್ತಿ ಕಡಿಮೆಯಾಗಲಿದೆ. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net