ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ರ‌್ಯಾಲಿ 20ರಿಂದ

IMG_20250918_122433.jpg
Published on


ಬೆಳಗಾವಿ :ಪಂಚಮಸಾಲಿ ಮೀಸಲಾತಿಯ 8ನೇ ಹಂತದ ಹೋರಾಟದ ಭಾಗವಾಗಿ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ರ‌್ಯಾಲಿ ಆರಂಭಿಸಲಾಗುತ್ತಿದ್ದು, ಸೆ. 20ರಂದು ಬೆಳಗ್ಗೆ 11ಕ್ಕೆ ರಾಯಬಾಗ ತಾಲೂಕಿನ ಹಾರೂಗೇರಿಯ ಚನ್ನವೃಷಭೇಂದ್ರ ಲೀಲಾಮಠದಲ್ಲಿ ಚಾಲನೆ ನೀಡಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ಸಮಾಜ 7 ಹಂತದ ಹೋರಾಟಗಳನ್ನು ಮಾಡಿತ್ತು. ಈಚೆಗೆ ಹೋರಾಟ ಮಾಡಿರಲಿಲ್ಲ. ಆದರೆ ಹೋರಾಟ ನಿರಂತವಾಗಿ ಇರಲೇಬೇಕು. ನಿಂತ ನೀರಾಗಬಾರದು ಎಂದುಕೊಮಡು ಈ ಹೊಸ ಕ್ರಾಂತಿ ರ‌್ಯಾಲಿಯನ್ನು ಆರಂಭಿಸುತ್ತಿದ್ದೇವೆ. ಇದು ಹಂತ ಹಂತವಾಗಿ ಪ್ರತಿಯೊಂದು ತಾಲೂಕು ಕೇಂದ್ರದಲ್ಲಿಯೂ ಜರುಗಲಿದೆ ಎಂದರು.
ಸದ್ಯ ಸರ್ಕಾರ ನಡೆಸಲಿರುವ ಜಾತಿ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮಾಜ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದೇ ಬರೆಸುವಂತೆ ತಿಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವೊಂದನ್ನು ಹಾರೂಗೇರಿ ಕಾರ್ಯಕ್ರಮದಲ್ಲಿಯೇ ಘೋಷಣೆ ಮಾಡಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಆಯೋಜಿಸಿರುವ ವೀರಶೈವ ಲಿಂಗಾಯತ ಏಕತಾ ಸಮಾವೇಶಕ್ಕೂ ಪಂಚಮಸಾಲಿಗಳಿಗೂ ಸಂಬಂಧವಿಲ್ಲ. ಹೀಗಾಗಿ ಪಂಚಮಸಾಲಿಗಳು ಯಾವುದೇ ಕಾರಣಕ್ಕೂ ಭಾಗವಹಿಸಬಾರದು ಎಂದು ಕರೆ ನೀಡಿದರು.
ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಅಧ್ಯಕ್ಷ ಆರ್.ಸಿ. ಪಾಟೀಲ ಮಾತನಾಡಿ, ಕಳೆದ ಅಧಿವೇಶನದ ಸಮಯದಲ್ಲಿ ನಡೆದಿದ್ದ ಲಾಠಿ ಚಾರ್ಜ್‌ಗೆ ಸಂಬಂಧಿಸಿ ನ್ಯಾಯಾಂಗ ತನಿಖೆ ಆರಂಭಗೊಂಡಿದೆ. ಸುವರ್ಣ ವಿಧಾನಸೌಧದಲ್ಲಿ  ಏಕಸದಸ್ಯ ನ್ಯಾಯಾಧೀಶರ ಆಯೋಗದ ಕಚೇರಿ ಮಾಡಿದ್ದಾರೆ. ನಮ್ಮ ಕಡೆಯ ಐವರು ಸಾಕ್ಷಿಗಳಿಗೆ ನೋಟಿಸ್ ಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿ ಇವತ್ತು ನಾವು ವಾದ ಮಂಡಿಸಿದ್ದು, ಸೆ. 23ರಂದು ಸಾಕ್ಷಿ ಹಾಜರುಪಡಿಸಲು ಅವಕಾಶ ನೀಡಿದ್ದಾರೆ ಎಂದು ವಿವರಿಸಿದರು.
ಅಡಿವೇಶ ಇಟಗಿ, ಸಿ.ಎಸ್. ನೇಗಿನಹಾಳ, ನಿಂಗಣ್ಣ ಕರಿಕಟ್ಟಿ, ಸುಧಾಕರ ಪಾಟೀಲ, ಗುಂಡು ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net