ಮಹಿಳಾ ಸಬಲೀಕರಣ ರಾಷ್ಟ್ರಪ್ರಗತಿಗೆ ದಾರಿ : ಗುರುಸಿದ್ಧ ಸ್ವಾಮೀಜಿ

IMG-20250822-WA0016.jpg
Published on

ಬೆಳಗಾವಿ : ಮಹಿಳೆಯರು ಪುರುಷರಷ್ಟೇ ಸಮಾನರಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಅವಿರತವಾಗಿ ದುಡಿಯುತ್ತಿರುವುದರಿಂದ ಮಹಿಳೆ ಅಬಲೆಯಲ್ಲ, ಸಬಲೆ ಪ್ರಬಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ. ಮಹಿಳೆಯರ ಈ ಸಬಲೀಕರಣದಿಂದ ರಾಷ್ಟ್ರದ ಪ್ರಗತಿಗೆ ಪೂರಕವಾಗುತ್ತದೆ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಶಿವಬಸವನಗರದ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ 290ನೇ ಶಿವಾನುಭವ ಹಾಗೂ ಶ್ರಾವಣ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಮಹಿಳಾ ಸಮಾವೇಶವು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು. ಜಾಗತೀಕರಣದ ಪರಿಣಾಮವಾಗಿ ಇಂದು ಪುರುಷ-ಮಹಿಳೆ ಎಂಬ ಲಿಂಗಭೇದಗಳು ಕಣ್ಮರೆಯಾಗಿ, ಪುರುಷರ ಸಮಾನವಾದ ಕೆಲಸ ಕಾರ್ಯಗಳನ್ನು ಮಹಿಳೆ ಕೂಡ ಮಾಡಬಲ್ಲಳು. ವಿಜ್ಞಾನ-ತಂತ್ರಜ್ಞಾನ-ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರ ಸಾಧನೆ ಅನನ್ಯವಾಗಿದೆ ಎಂದು ಹೇಳಿದರು.

ಡಾ. ಅಶ್ವಿನಿ ಭಾಗೋಜಿ ಅವರು ‘ಮಹಿಳೆ ಅಬಲೆಯಲ್ಲ-ಸಬಲೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ, ಮಹಿಳೆ ತನ್ನ ಸಬಲತ್ವವನ್ನು ಎಲ್ಲ ರಂಗಗಳಲ್ಲಿಯೂ ತೋರಿಸಿದ್ದಾಳೆ, ಹೀಗಿದ್ದೂ ಸಾಮಾಜಿಕವಾಗಿ ಅವಳಿಗೆ ದೊರೆಯಬೇಕಾದ ಪ್ರಾತಿನಿಧ್ಯ ದೊರೆತಿಲ್ಲ. ಸಂವಿಧಾನ ಪ್ರದತ್ತವಾದ ಸಮಾನ ಅವಕಾಶಗಳು ಮಹಿಳೆಗೆ ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ದೊರೆತರೆ ಭಾರತ ಇನ್ನೂ ಸಮೃದ್ಧವಾಗುವುದರಲ್ಲಿ ಸಂದೇಹವಿಲ್ಲವೆಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ಮಧುಮತಿ ಹಿರೇಮಠ ಅವರು ಮಹಿಳಾ ಸಬಲೀಕರಣದ ಪರಿಣಾಮಗಳ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಾರ್ಥಕ 75 ವರ್ಷಗಳನ್ನು ಪೂರೈಸಿದ ರಾಜೇಶ್ವರಿ ಸಂಬರಗಿಮಠ ಅವರ ಅಮೃತ ಮಹೋತ್ಸವವನ್ನು ಶ್ರೀಮಠದಿಂದ ಆಚರಿಸಲಾಯಿತು.

ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ಪ್ರೊ. ರಿಟಾ ಬಣಗಾರ ಇವರು ಇಂಗ್ಲಿಷ್ಗೆ ಅನುವಾದಿಸಿದ “ಕಾರುಣ್ಯದ ಕಾರಂಜಿ (Fountain of Compassion)” ಗ್ರಂಥದ ಲೋಕಾರ್ಪಣೆಯೂ ಪೂಜ್ಯರಿಂದ ನೆರವೇರಿತು.

ಕುಮಾರಸ್ವಾಮಿ ಬಡಾವಣೆಯ ಮಾತೆಯರಿಂದ ಸಂಗೀತ ಕಾರ್ಯಕ್ರಮಗಳು ಜರುಗಿದವು.

ನಯನಾ ಗಿರಿಗೌಡರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net