

ಮೂಡುಬಿದಿರೆ: ಪ್ರಸ್ತುತ ಆಳ್ವಾಸ್ ಟೆಕ್ ಪಾರ್ಕ್ನಲ್ಲಿ 8 ಕಾರ್ಪೊರೇಟ್ ಕಂಪನಿಗಳು, 4 ಸ್ಟಾರ್ಟಅಪ್ಗಳು ಮತ್ತು 2 ಸೆಂಟರ್ ಆಫ್ ಎಕ್ಸೆಲೆನ್ಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳು ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಉತ್ತೇಜಿಸುತ್ತಿವೆ. ಈಗಾಗಲೇ 75 ವಿದ್ಯಾರ್ಥಿಗಳು ತಮ್ಮ 12 ಹೊಸ ಸ್ಟಾರ್ಟಅಪ್ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಕ್ರಿಯ ತರಬೇತಿ ಪಡೆಯುತ್ತಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಟೆಕ್ ಪಾರ್ಕ್ನಲ್ಲಿ ಸ್ವಿಚ್ಗೇರ್ ಆ್ಯಂಡ್ ಕಂಟ್ರೋಲ್ ಟೆಕ್ನಿಕ್ಸ್ ಪ್ರೈವೇಟ್ ಲಿಮಿಟೆಡ್ ಹೊಸ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಿಚ್ಗೇರ್ ಸಂಸ್ಥೆಯ ನಿರ್ದೇಶಕ ಹರ್ಷಿತ್ ಶೆಟ್ಟಿ ಮಾತನಾಡಿ, ಮೂಡುಬಿದಿರೆಯಲ್ಲಿ ಆರಂಭಗೊಂಡ ಈ ಘಟಕವನ್ನು ಮಿನಿಯೇಚರ್(ಕಂಪನಿಯ ಉತ್ಪನ್ನಗಳ ಸಣ್ಣ ರೂಪ) ತಯಾರಿಕಾ ಕೇಂದ್ರವಾಗಿ ಬಳಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಕೆಲಸದ ಅನುಭವ ದೊರೆಯಲಿದ್ದು, ತರಬೇತಿ ಪಡೆಯುವಾಗಲೇ ಸಂಪಾದನೆ ಮಾಡುವ ಅವಕಾಶವೂ ಸಿಗಲಿದೆ. ಇಲ್ಲಿ ತರಬೇತಿ ಪಡೆಯುವವರು ಭವಿಷ್ಯದಲ್ಲಿ ಹೊಸದಾಗಿ ಸೇರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಆಳ್ವಾಸ್ ಪಪೂ ಕಾಲೇಜಿನಲ್ಲಿ ಶಿಕ್ಷಣ ಪಡೆದ ಹರ್ಷಿತ್ ಶೆಟ್ಟಿ ಮಾತನಾಡಿದರು. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್, ಸ್ವಿಚ್ಗೇರ್ ಸಂಸ್ಥೆ ನಿರ್ದೇಶಕ ವಿನಯ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯಮಶೀಲ ಅಭಿವೃದ್ಧಿ ಕೋಶದ ಮುಖ್ಯಸ್ಥ ವೇಣುರಾವ್ ದೇವ್, ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಪಕ ಡಾ.ಕುಮಾರಸ್ವಾಮಿ, ಶ್ರೀನಿವಾಸ ಇದ್ದರು.