

ಬೈಲಹೊಂಗಲ: ಪಟ್ಟಣದ ಮಿನಿ ವಿಧಾನಸೌಧದ ಬಸವೇಶ್ವರ ಉದ್ಯಾನವನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಈಜುಕೊಳ ಕುರಿತಾದ ವಿವಾದ ಇತ್ಯರ್ಥಗೊಂಡಿದೆ ಎಂದು ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಮುಖಂಡರೊಂದಿಗೆ ಈಜುಕೊಳ ನಿರ್ಮಾಣದ ಸ್ಥಳ ವೀಕ್ಷಿಸಿ ಮಾತನಾಡಿದ ಅವರು, ಬಸವೇಶ್ವರ ಉದ್ಯಾನವನದಲ್ಲಿ ನಿರ್ಮಾಣಗೊಳ್ಳಲಿರುವ ಈಜುಕೊಳದ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ, ಶ್ರೀ ಮಠದಲ್ಲಿ ಸಮುದಾಯದ ಮುಖಂಡರ ಸಮ್ಮುಖದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಈಗಿರುವ ಮೂರ್ತಿಯನ್ನು ತೆರವುಗೊಳಿಸಿ ಅಶ್ವಾರೂಢ ಬಸವೇಶ್ವರರ ಕಂಚಿನ ಮೂರ್ತಿ ಪ್ರತಿಷ್ಠಾಪಿಸಬೇಕು.
ಮೂರ್ತಿಯ ಕೆಳ ಭಾಗದ ಕಾಂಕ್ರಿಟ್‌ನಿಂದ 15 ಅಡಿ ದೂರದಲ್ಲಿ 20 ಅಡಿ ಎತ್ತರದಷ್ಟು ಈಜುಕೊಳದ ಗೋಡೆ ನಿರ್ಮಿಸಬೇಕು. ಗೋಡೆಯ ಮೇಲೆ ಬಸವೇಶ್ವರರ ವಚನಗಳನ್ನು ಬರೆಯಿಸುವ ಜತೆಗೆ ಉದ್ಯಾನವನದ ಅಭಿವೃದ್ಧಿಗೆ ಗಮನ ಹರಿಸಬೇಕೆಂದು ಮುಖಂಡ ಶಿವರಂಜನ ಬೋಳನ್ನವರ ಅವರಿಗೆ ಶಾಸಕ ಮಹಾಂತೇಶ ಕೌಜಲಗಿ ಅವರ ಗಮನಕ್ಕೆ ತರುವಂತೆ ತಿಳಿಸಲಾಗಿದೆ ಎಂದರು. ಮುಖಂಡ ಶಿವರಂಜನ ಬೋಳನ್ನವರ ಮಾತನಾಡಿ, ಯುವ ಸಮುದಾಯದಕ್ಕಾಗಿ ಈಜುಕೊಳ ನಿರ್ಮಿಸುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ, ಪಾಂಡಪ್ಪ ಇಂಚಲ, ಉಳವಪ್ಪ ಬಡ್ಡಿಮನಿ, ಸಿ.ಕೆ. ಮೆಕ್ಕೆದ, ಸೋಮಪ್ಪ ವಾಲಿ, ಗುರು ಮೆಟಗುಡ್ಡ, ಮಹೇಶ ಬೆಲ್ಲದ, ಶ್ರೀಕಾಂತ ಮತ್ತಿಕೊಪ್ಪ, ವೀರೇಶ ಹಲಕಿ ಇತರರಿದ್ದರು.