ಪದ್ಮಾಸನ ಭಂಗಿಯಲ್ಲಿ ಸಮುದ್ರದಲ್ಲಿ ಈಜು

Ganaga
Published on

ಉಡುಪಿ: ದಶಕಗಳಿಂದ ಈಜು ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹಲವು ಸಾಧನೆ ಮಾಡಿರುವ ಕಡೆಕಾರಿನ ಗಂಗಾಧರ ಜಿ. (65) ಅವರು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗಾಗಿ ಜ.24ರಂದು ಬೆಳಗ್ಗೆ 8ಕ್ಕೆ ಮಲ್ಪೆ-ಪಡುಕೆರೆ ಶ್ರೀ ದೇವಿ ಭಜನಾ ಮಂದಿರದ ಕಡಲ ತೀರದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿಕೊಂಡು ಬ್ರೆಸ್ಟ್ ಸ್ಟ್ರೋಕ್ ಶೈಲಿಯಲ್ಲಿ ಸಮುದ್ರದಲ್ಲಿ 1 ಕಿ.ಮೀ. ಈಜಲಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ನಗರಸಭಾ ಮಾಜಿ ಸದಸ್ಯ ಪಾಂಡುರಂಗ ಮಲ್ಪೆ, ಸಾರಿಗೆ ಇಲಾಖೆ ನಿವೃತ್ತ ಉದ್ಯೋಗಿ ಗಂಗಾಧರ ಬಾಲ್ಯದಿಂದಲೇ ಪರಿಪೂರ್ಣ ಪರಿಣತಿ ಹೊಂದಿ ಸಮುದ್ರ, ಹೊಳೆ, ಈಜುಕೊಳದಲ್ಲಿ ಈಜಾಡಿ ಸಾಧನೆ ಮಾಡಿದ್ದಾರೆ. 2006ರಲ್ಲಿ ಜೈ ದುರ್ಗಾ ಸ್ವಿಮ್ಮಿಂಗ್ ಕ್ಲಬ್ ಸ್ಥಾಪಿಸಿ, ಆಸಕ್ತರಿಗೆ ಉಚಿತವಾಗಿ ಈಜು ಕಲಿಸುತ್ತಿದ್ದಾರೆ. ಶೇ.70 ಬುದ್ಧಿಮಾಂದ್ಯವಿರುವ ಮಕ್ಕಳಿಗೂ ಈಜು ಕಲಿಸಿ ಸೈ ಎನಿಸಿಕೊಂಡಿದ್ದಾರೆ. ಕಡೆಕಾರಿನಲ್ಲಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳನ್ನು ಪ್ರತೀ ವಾರ ಸಮುದ್ರದಲ್ಲಿ 2-3 ಕಿ.ಮೀ. ದೂರ ಗಂಟೆಗಟ್ಟಲೆ ನಿರ್ಭಯದಿಂದ ಈಜುವಂತೆ ತರಬೇತುಗೊಳಿಸುವ ಸಾಹಸಿ ತರಬೇತುದಾರ. ಸ್ಟೇಟ್, ಮಾಸ್ಟರ್ಸ್‌ ಅಕ್ವಾಟಿಕ್ ಚಾಂಪಿಯನ್‌ಷಿಪ್ ಸ್ಪರ್ಧೆಗಳಲ್ಲಿ ಭಾಗವಹಿಸಿ 2009ರಿಂದ 2019ರವರೆಗೆ ಒಟ್ಟು 31 ಚಿನ್ನ, 16 ಬೆಳ್ಳಿ, 9 ಕಂಚಿನ ಪದಕ ಪಡೆದಿದ್ದಾರೆ ಎಂದರು.

ಈಜುಪಟು ಗಂಗಾಧರ ಜಿ, ಕ್ಲಬ್‌ನ ಉಪಾಧ್ಯಕ್ಷ ಚಂದ್ರ ಎ.ಕುಂದರ್, ಹರ್ಷ ಮೈಂದನ್, ಜನಾರ್ದನ ಕೋಟ್ಯಾನ್, ನಗರಸಭೆಯ ನಾಮನಿರ್ದೇಶಿತ ಸದಸ್ಯ ವಿಜಯ ಕುಂದರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net