ಸುಡು ಬೇಸಿಗೆಯಲ್ಲಿ ಈಜಿನ ಮೋಜು, ಈಜುಕೊಳದಲ್ಲಿ ಕಲರವ

3EE3D28A-C28E-4EF9-8096-8C5CE41A29BB.jpeg
Published on

ಚಿಕ್ಕಬಳ್ಳಾಪುರ: ಸುಡು ಬೇಸಿಗೆಯಲ್ಲಿ ಸೆಖೆಯ ಬಾಧಿಸುತ್ತಿದ್ದು ಹಲವರು ತೊಟ್ಟಿ, ಬಾವಿ, ಕೊಳಗಳಲ್ಲಿ ಈಜಾಡಿ ಮುದ ಅನುಭವಿಸುತ್ತಿದ್ದಾರೆ.
ಹೌದು!  ಪ್ರಸ್ತುತ ಉಷ್ಣಾಂಶ ಸರಾಸರಿ 32 ಡಿಗ್ರಿ ಸೆಲಿಯಷ್ಸ್ ಇದೆ. ಒಂದೆಡೆ ತಂಪು ಪಾನೀಯಾಗಳ ಸೇವನೆ, ಹವಾ ನಿಯಂತ್ರಕದ ವ್ಯಾಪ್ತಿಯಲ್ಲಿನ ತಂಪು ವಾತಾವರಣದಲ್ಲಿ ವಿಶ್ರಾಂತಿ ಪಡೆಯುವ ಮೂಲಕ ದಣಿವು ನೀಗಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸೆಖೆಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಹಲವರು ಗಂಟೆಗಟ್ಟಲೇ ನೀರಿನಲ್ಲಿ ಈಜುತ್ತಿದ್ದಾರೆ.
ಪ್ರಸ್ತುತ ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿರುವ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಈಜುಕೊಳದಲ್ಲಿ ಈಜುಪಟುಗಳ ಕಲರವ ಕಂಡು ಬರುತ್ತಿದೆ. ಒಂದು ಗಂಟೆಗೆ ಈಜಲು 50 ರೂ ನಿಗದಿಪಡಿಸಿದ್ದು ಬೆಳಿಗ್ಗೆಯಿಂದ ಸಂಜೆಯವರೆಗೆ ಮಕ್ಕಳು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ವಿವಿಧ ಬ್ಯಾಚುಗಳಲ್ಲಿ ನಿಗದಿತ ಅವಧಿಯವರೆಗೂ ಇಲ್ಲಿ ಈಜಲು ಅವಕಾಶ ನೀಡಲಾಗಿದೆ. ಅದರಲ್ಲೂ ಮಹಿಳೆಯರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಬೇಸಿಗೆಯ ಅವಧಿಯಲ್ಲಿ ಒಳ್ಳೆಯ ಆದಾಯ ಗಳಿಸುವ ನಿರೀೆಯಿದೆ.


*ಹೈಟೆಕ್ ನಿರ್ವಹಣೆಯ ಸಮಸ್ಯೆ
ಜಿಲ್ಲಾ ಕ್ರೀಡಾಂಗಣದಲ್ಲಿ 1.30ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಈಜುಕೊಳ ನಿರ್ಮಿಸಲಾಗಿದೆ. ಚಳಿಗಾಲ ಮತ್ತು ಮಳೆಗಾಲ ಹೊರತುಪಡಿಸಿ ಉಳಿದ ಸಮಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಕಳೆದ ಕರೊನಾ ಸೋಂಕಿನ ಅವಧಿಯಲ್ಲು ಮೂರು ವರ್ಷ ಮುಚ್ಚಲಾಗಿತ್ತು. ಹಾಗೆಯೇ ಅವೈಜ್ಞಾನಿಕ ಕ್ರಮ ಮತ್ತು ನಾನಾ ಅವ್ಯವಸ್ಥೆಗೆ ಯಂತ್ರೋಪಕರಣಗಳು ಹಾಳಾಗಿದ್ದು ಕೊಳದಲ್ಲಿ ಗಲೀಜು ತುಂಬಿತ್ತು. ಇನ್ನು ಹಿಂದೆ ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಈಜುಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಂದರ್ಭದಲ್ಲಿ ಸಣ್ಣಪುಟ್ಟ ರಿಪೇರಿ ಹೆಸರಿನಲ್ಲಿ ಬಾಗಿಲು ಮುಚ್ಚುತ್ತಿದ್ದರಿಂದ ಆದಾಯಕ್ಕೆ ಪೆಟ್ಟು ಬೀಳುತ್ತಿತ್ತು. ಇದರ ಬಗ್ಗೆ ವ್ಯಾಪಕ ಆಕ್ರೋಶ ವಾಗಿದ್ದು ಈ ಬಾರಿ 25 ದಿನ ವಿಳಂಬವಾಗಿಯಾದರೂ ಈಜುಕೊಳ ಕಾರ್ಯಾರಂಭಿಸಿದೆ. ಹಿಂದೆ 30 ರೂ ಇದ್ದ ಶುಲ್ಕವನ್ನು 50 ರೂಗಳಿಗೆ ಹೆಚ್ಚಿಸಲಾಗಿದೆ. ಬೇಸಿಗೆಯಲ್ಲಿ ಉತ್ತಮ ನಿರ್ವಹಣೆಗೆ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆ ಸಂಸ್ಥೆಗೆ ಸೂಚಿಸಿದ್ದಾರೆ.

*ಕೆರೆ ಕುಂಟೆಗಳಲ್ಲಿ ಸಾವು
ಪ್ರತಿ ವರ್ಷ ಬೇಸಿಗೆಯ ಅವಧಿಯಲ್ಲಿ ಕೆರೆ ಕುಂಟೆ, ಹೊಂಡಗಳಲ್ಲಿ ಈಜಾಡಲು ಹೋಗಿ ಹಲವರು ನೀರಿನಲ್ಲಿ ಮುಳುಗಿ ಮೃತಪಡುವ ಪ್ರಕರಣಗಳು ನಡೆಯುತ್ತಲೇ ಇವೆ. ಜಿಲ್ಲೆಯ ಮಂಚೇನಹಳ್ಳಿ, ಶ್ರೀನಿವಾಸ ಸಾಗರ, ದಂಡಿಗಾನಹಳ್ಳಿ ಜಲಾಶಯಗಳು ಸೇರಿದಂತೆ ಜಲ ವಿವಿಧ ಮೂಲಗಳು ಅನೇಕರನ್ನು ಬಲಿ ಪಡೆದುಕೊಂಡಿವೆ. ಇತ್ತೀಚೆಗೆ ಚಿಂತಾಮಣಿಯಲ್ಲಿ ಕೃಷಿ ಹೊಂಡಕ್ಕೆ ಇಳಿದು ಮೂವರು ಮೃತಪಟ್ಟಿದ್ದರು. ಇಂತಹ ಪ್ರಕರಣಗಳು ಮುಂಬರುವ ದಿನಗಳಲ್ಲಿ ಸಂಭವಿಸದಿರಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net