

ಮಂಗಳೂರು: ನಗರದ ವಿ ಒನ್ ಅಕ್ವಾ ಸೆಂಟರ್ ವತಿಯಿಂದ ಸಂತ ಅಲೋಶಿಯಸ್ ಸ್ವಿಮ್ಮಿಂಗ್ ಪೂಲ್ ಮತ್ತು ಡಾಲಿನ್ ಅಕ್ವಾಟಿಕ್ಸ್ ಸಹಯೋಗದಲ್ಲಿ ಭಾನುವಾರ ನಗರದ ಸಂತ ಅಲೋಶಿಯಸ್ ಈಜು ಕೊಳದಲ್ಲಿ ರಾಜ್ಯಮಟ್ಟದ ಈಜು ಸ್ಪರ್ಧೆ ಜರುಗಿತು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ಫಾ.ಮೆಲ್ವಿನ್ ಜೋಸೆಫ್ ಪಿಂಟೋ ಉದ್ಘಾಟಿಸಿ, ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲ ಫಾ.ಪ್ರವೀಣ್ ಮಾರ್ಟಿಸ್, ವಿ ಒನ್ ಅಕ್ವಾ ಸೆಂಟರ್ ನಿದೇರ್ಶಕರಾದ ನವೀನ್, ರೂಪಾ ಜಿ.ಪ್ರಭು, ಅಕ್ವಾಟಿಕ್ ಕ್ಲಬ್‌ನ ಅಧ್ಯಕ್ಷ ಡಾ.ನಾಗೇಂದ್ರ ನಾಯಕ್ ಸುಜೀರ್, ಮುಖ್ಯತರಬೇತುದಾರ ಲೋಕನಾಥ್ ಮೊದಲಾದವರು ಉಪಸ್ಥಿತರಿದ್ದರು. ನಂದ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.
ದ.ಕ ಜಿಲ್ಲೆ, ಉಡುಪಿ ಸಹಿತ ರಾಜ್ಯದ ವಿವಿಧೆಡೆಯ ಸುಮಾರು 300ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು. 8- 17 ವರ್ಷದ ವಯೋಮಾನದ ಹುಡುಗ ಮತ್ತು ಹುಡುಗಿಯರ 6 ವಿಭಾಗಗಳಲ್ಲಿ 80ಕ್ಕೂ ಅಧಿಕ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಪದಕ,ಪ್ರಮಾಣ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಉಪಯೋಗಿಸುವ ಡಿಜಿಟಲ್ ತಂತ್ರಜ್ಞಾನವನ್ನು ಸ್ಪರ್ಧೆಯಲ್ಲಿ ನಿಖರ ಫಲಿತಾಂಶಕ್ಕಾಗಿ ಬಳಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.