

ಮಂಡ್ಯ: ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯನ್ನು ಮಂಡ್ಯದಲ್ಲಿಯೇ ಆಯೋಜನೆ ಮಾಡಲಾಗುವುದು ಎಂದು ರಾಜ್ಯ ಈಜು ಸಂಸ್ಥೆಯ ಕಾರ್ಯದರ್ಶಿ ಎಂ.ಸತೀಶ್‌ಕುಮಾರ್ ತಿಳಿಸಿದರು.
ನಗರದ ಪಿಇಟಿ ಈಜು ಕೇಂದ್ರದಲ್ಲಿ ಜನತಾ ಶಿಕ್ಷಣ ಟ್ರಸ್ಟ್ ಹಾಗೂ ರಾಜ್ಯ ಈಜು ಸಂಸ್ಥೆಯಿಂದ ಆಯೋಜಿಸಿದ್ದ ನಾಲ್ಕು ದಿನದ 21ನೇ ರಾಜ್ಯಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಮಂಡ್ಯದ ಪಿಇಟಿ ಈಜು ಕೇಂದ್ರದಲ್ಲಿ ಇರುವ ಸೌಲಭ್ಯಗಳು ಭಾರತದಲ್ಲಿಯೇ ಸಿಗುವ ಅತ್ಯುತ್ತಮ ಸೌಲಭ್ಯಗಳಲ್ಲಿ ಒಂದಾಗಿದೆ. ಇನ್ನು ಕರ್ನಾಟಕದಲ್ಲಿ ಈ ರೀತಿಯ ಈಜು ಕೇಂದ್ರ ಮತ್ತೊಂದಿಲ್ಲ. ಈ ಕಾರಣಕ್ಕಾಗಿಯೇ 21 ರಾಜ್ಯಮಟ್ಟದ ಈಜು ಸ್ಪರ್ಧೆಗಳಲ್ಲಿ 11 ಸಲ ಪಿಇಟಿ ಈಜು ಕೇಂದ್ರದಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಇಲ್ಲಿ ಭಾಗವಹಿಸಲು ಬಂದಿರುವ ಬಹುತೇಕ ವಿದ್ಯಾರ್ಥಿಗಳು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಪ್ರಯುತ್ನ ಪಡುತ್ತಿದ್ದಾರೆ. ಅವರ ಆಶಯ ಆದಷ್ಟು ಬೇಗ ನೆರವೇರಲಿ. ಇಂತಹ ಪ್ರತಿಭೆಗಳಿಂದಲೇ ರಾಜ್ಯ ಈಜು ಸಂಸ್ಥೆಯು ಸತತವಾಗಿ 31 ಸಲ ದೇಶದಲ್ಲಿ ಪ್ರಥಮ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, 21ನೇ ರಾಜ್ಯ ಮಟ್ಟದ ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಕರ್ನಾಟಕದಾದ್ಯಂತ 550 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 11 ಬಾರಿ ನಮ್ಮ ಪಿಇಟಿ ಸಂಸ್ಥೆ ರಾಜ್ಯಮಟ್ಟದ ಸ್ಪರ್ಧೆಗೆ ಆತಿಥ್ಯ ನೀಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ನಿರ್ದೇಶಕ ಡಾ.ರಾಮಲಿಂಗಯ್ಯ, ಈಜು ಕೇಂದ್ರದ ಆಡಳಿತಾಧಿಕಾರಿ ಡಾ.ಚಂದ್ರಶೇಖರ್ ಹಾಜರಿದ್ದರು.