

ಜಿ.ನಾಗರಾಜ್ ಬೂದಿಕೋಟೆ
ಬಂಗಾರಪೇಟೆ ತಾಲೂಕಿನ ರೈತರು ಕಡಿಮೆ ಬಂಡವಾಳದೊಂದಿಗೆ ಪರ್ಯಾಯ ಬೆಳೆಯಾಗಿ ಸಿಹಿ ಕುಂಬಳವನ್ನು ಬೆಳೆದು ಉತ್ತಮ ಆದಾಯ ಪಡೆಯಲು ಮುಂದಾಗಿದ್ದಾರೆ.
ಕೋಲಾರ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಟೊಮ್ಯಾಟೊ ಬೆಳೆ ಬೆಳೆದು ಕೈ ಸುಟ್ಟುಕೊಳ್ಳುವುದು ಸಾಮಾನ್ಯವಾಗಿದ್ದು, ಇಂತಹ ಸಮಯದಲ್ಲಿ ಕೆಲವು ರೈತರು ತರಕಾರಿ ಬೆಳೆಗಳ ಜತೆಗೆ ಸಿಹಿ ಕುಂಬಳ ಮತ್ತು ಬೂದು ಕುಂಬಳ ಪರ್ಯಾಯ ಬೆಳೆಗಳಾಗಿ ಬೆಳೆದು ಆದಾಯ ಕಂಡುಕೊಂಡಿದ್ದಾರೆ. ಎರಡೂ ಬಗೆಯ ಕುಂಬಳಗಳನ್ನು ಬೆಳೆಯಲು ನಿರ್ವಹಣೆ ಮತ್ತು ಕಡಿಮೆ ಬಂಡವಾಳದ ಅವಶ್ಯವಿರುವ ಕಾರಣದಿಂದ ರೈತರು ಹೆಚ್ಚಿನ ಒಲವು ತೋರಿಸಿದ್ದಾರೆ.
ತರಕಾರಿ ಬೆಳೆಗಳನ್ನು ಬೆಳೆಯಲು ಲಕ್ಷಾಂತರ ರೂ. ಬಂಡವಾಳ ಹಾಕಬೇಕಿದ್ದು, ನಿರ್ವಹಣೆಯೂ ಸಹ ಹೆಚ್ಚಿರುತ್ತದೆ.
ಜತೆಗೆ ಮಾರುಕಟ್ಟೆಯಲ್ಲಿ ಸಮರ್ಪಕ ಬೆಲೆ ಇಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಆದರೆ ಸಿಹಿ ಕುಂಬಳದಲ್ಲಿ ಹೆಚ್ಚಿನ ಪೋಷಕಾಂಶಗಳು ಲಭ್ಯವಿರುವ ಕಾರಣ ಹಾಗೂ ಸಿಹಿ ಪದಾರ್ಥಗಳಿಗೆ ಬಳಕೆ ಮಾಡುವುದರಿಂದ ಬೇಡಿಕೆ ಹೆಚ್ಚಿದೆ. ಇದರಿಂದಾಗಿ ತಾಲೂಕಿನಲ್ಲಿ 24.78 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದು, ಉತ್ತಮ ಫಸಲು ಸಹ ಬಂದಿದೆ.
ಕುಂಬಳವನ್ನು ಕೆಲವು ತಿಂಗಳುಗಳ ಕಾಲ ಕೆಡದಂತೆ ಶೇಖರಣೆ ಮಾಡಲು ಅವಕಾಶ ಇರುವುದರಿಂದ ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳುವಂತಿಲ್ಲ. ಜತೆಗೆ ಕೊಲ್ಕತ್ತಾ ಸೇರಿ ಇತರೆ ಭಾಗಗಳಿಂದ ವ್ಯಾಪಾರಸ್ಥರು ರೈತರ ತೋಟಗಳಿಗೆ ಭೇಟಿ ನೀಡಿ ಖರೀದಿ ಮಾಡುತ್ತಿದ್ದಾರೆ. ಬೆಳೆಗೆ ನೀರಿನ ಬಳಕೆ ಕಡಿಮೆ ಇದ್ದು, ರೋಗ ಬಾಧೆಯೂ ಸಹ ಕಡಿಮೆ ಆಗಿರುವುದರಿಂದ ರೈತರಲ್ಲಿ ಆಸಕ್ತಿ ಹೆಚ್ಚಾಗಿದೆ.
ಕುಂಬಳ ಬೆಳೆ ಮೂರು ತಿಂಗಳ ಬೆಳೆಯಾಗಿದ್ದು, ತಾಲೂಕಿನಲ್ಲಿ ನವರಾತ್ರಿ ಮತ್ತು ದೀಪಾವಳಿ ಸಮಯಕ್ಕೆ ಇಳುವರಿ ಬರುವಂತೆ ರೈತರು ಬೂದಕುಂಬಳ ಬೆಳೆಯುತ್ತಾರೆ. ಸಂಕ್ರಾಂತಿ ಹಬ್ಬಕ್ಕೂ ಮುಂಚೆ ಸಿಹಿ ಕುಂಬಳ ಇಳುವರಿ ಬರುವಂತೆ ನೋಡಿಕೊಳ್ಳುತ್ತಿದ್ದು, ಇದರಿಂದ ದುಪ್ಪಟ್ಟು ಆದಾಯವೂ ಕಾಣುವಂತಾಗಿದೆ.
ಮೂರು ಎಕರೆ ಪ್ರದೇಶದಲ್ಲಿ ಎಂಟು ಸಾವಿರ ಬೀಜ ಬಿತ್ತನೆ ಮಾಡಿ ಕುಂಬಳಕಾಯಿ ಬೆಳೆಯಲಾಗಿದೆ. ಉತ್ತಮ ಇಳುವರಿ ಬಂದಿದ್ದು, ಪ್ರತಿ ಕೆಜಿಗೆ 9 ರೂ. ನಂತೆ ಕಲ್ಕತ್ತಾ ವ್ಯಾಪಾರಸ್ಥರಿಗೆ ಮಾರಾಟ ಮಾಡಲಾಗಿದ್ದು, ಉತ್ತಮ ಆದಾಯವೂ ಕಂಡಿಕೊಂಡಿದ್ದೇವೆ. - ಸತೀಶ್ ರೈತ ವಟ್ಟಿಗಲ್ ರೈತರು ಒಂದೇ ಬಗೆಯ ಬೆಳೆ ಬೆಳೆಯುವುದರ ಬದಲು ವಿವಿಧ ಬಗೆಯ ತರಕಾರಿ ಬೆಳೆ ಬೆಳೆಯುವುದರಿಂದ ರೋಗ ರುಜನುಗಳ ನಿಯಂತ್ರಣ ಮಾಡಬಹುದು. ಭೂಮಿಯ ಫಲವತ್ತತೆಯನ್ನು ಹತೋಟಿಗೆ ತರಬಹುದು ಮತ್ತು ನಿರಂತರ ಆದಾಯ ಪಡೆಯಬಹುದಾಗಿದೆ. - ಡಾ.ಶಿವಾರೆಡ್ಡಿ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ