

ಕುಶಾಲನಗರ:
ಇನ್ನೇನು ಕಟಾವು ಮಾಡಬೇಕು ಎನ್ನುವ ಸಂದರ್ಭದಲ್ಲಿ ಔಷಧಿ ವಿತರಕನೊಬ್ಬನ ಮಾತು ನಂಬಿ ಔಷಧಿ ಸಿಂಪಡಿಸಿದ ಪರಿಣಾಮ ಸಮೀಪದ ಸಿದ್ದಲಿಂಗಪುರ ಗ್ರಾಮದಲ್ಲಿ ರೈತನೊಬ್ಬ ಲಕ್ಷಾಂತರ ಮೌಲ್ಯದ ಸಿಹಿಗೆಣಸು ಫಸಲು ಕಳೆದುಕೊಂಡಿದ್ದಾರೆ. ಸಿದ್ದಲಿಂಗಪುರದ ಕೃಷಿಕ ಬಿ.ಎಸ್. ರಮೇಶ್ ಎಂಬವರು ಒಂದೂವರೆ ಎಕರೆ ಭೂಮಿಯಲ್ಲಿ ಸಿಹಿ ಗೆಣಸು ಬೆಳೆದಿದ್ದರು.
ಕಟಾವು ಮಾಡುವ ದಿನಗಳು ಹತ್ತಿರ ಬರುತ್ತಿದ್ದಂತೆಯೇ ಇವರನ್ನು ಸಂಪರ್ಕಿಸಿದ ಔಷಧ ವಿತರಕನೊಬ್ಬ ತನ್ನ ಬಳಿ ಇರುವ ಎರಡು ಔಷಧಿಗಳನ್ನು ಮಿಶ್ರಣ ಮಾಡಿ ಗೆಣಸಿನ ಬಳ್ಳಿ ಬುಡಕ್ಕೆ ಸುರಿದರೆ ಇಳುವರಿ ಹೆಚ್ಚಾಗುತ್ತದೆ ಎನ್ನುವ ಸಲಹೆ ನೀಡಿದ.
ಇದನ್ನು ನಂಬಿದ ರಮೇಶ್ ತಮ್ಮ ಒಂದೂವರೆ ಎಕರೆಯಲ್ಲಿದ್ದ ಫಸಲು ಭರಿತ ಗೆಣಸು ಬೆಳೆಯ ಬುಡಗಳಿಗೆ ಔಷಧಿ ಸುರಿದಿದ್ದರು. ಇದಾದ ನಂತರ ಕಟಾವು ಮಾಡಿದ ಮರುದಿನವೇ ಫಸಲು ಕಂದು ಬಣ್ಣಕ್ಕೆ ತಿರುಗಿ ಕೊಳೆತ ವಾಸನೆ ಬೀರುತ್ತಿದ್ದು ಲಕ್ಷಾಂತರ ರೂ. ನಷ್ಟವಾಗಿದೆ ಎಂದು ರೈತ ರಮೇಶ್ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಔಷಧಿ ವಿತರಕ ತಾನು ನೀಡಿದ ಔಷಧಿಯಿಂದ ಆಗಿರುವ ಸಮಸ್ಯೆ ಇದಲ್ಲ. ಆ ಔಷಧಿ ಮೇಲೆ ಅನುಮಾನವಿದ್ದರೆ ಯಾವುದೇ ಪ್ರಯೋಗಾಲಯಕ್ಕೆ ಕಳಿಸಲಿ. ಔಷಧಿ ಸರಿ ಇಲ್ಲದೇ ಹೋದಲ್ಲಿ ಆಗಿರುವ ನಷ್ಟ ಭರಿಸುವ ಸವಾಲು ಹಾಕಿದ್ದಾರೆ. ಈ ಸಂದರ್ಭ ಗ್ರಾಮದ ವಿವಿಧ ರೈತರು ಈ ಬಗ್ಗೆ ದೂರು ನೀಡಿ ವಿತರಿಸಿರುವ ಔಷಧಿಯ ಬಗ್ಗೆ ತನಿಖೆ ನಡೆಸಿ ನಷ್ಟಕ್ಕೆ ತುತ್ತಾಗಿರುವ ರೈತ ರಮೇಶನಿಗೆ ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.