

ಸೋಮವಾರಪೇಟೆ: ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಶ್ರದ್ಧೆ ಇದ್ದರೆ ಗುರಿ ಸಾಧಿಸಬಹುದೆಂದು ಮಾಜಿ ಸಚಿವ ಎಂ.ಪಿ.ಅಪ್ಪಚುರಂಜನ್ ತಿಳಿಸಿದರು.
ತಾಲೂಕಿನ ಯಡವನಾಡು ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಸೋಮವಾರ ಸ್ವೆಟರ್ ವಿತರಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಬಹಳ ಮುಖ್ಯ. ಶಿಕ್ಷಣವಿಲ್ಲದೆ ಬದುಕು ಕಷ್ಟಕರ. ಜೀವನದಲ್ಲಿ ಶಿಸ್ತು ಮತ್ತು ಶ್ರದ್ಧೆಯನ್ನು ಮೈಗೂಡಿಸಿಕೊಂಡರೆ ಎಂತಹ ಕಠಿಣ ಶಿಕ್ಷಣವಾದರೂ ಪಡೆದುಕೊಳ್ಳಬಹುದು. ಮಕ್ಕಳು ಕಲಿಕೆಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕು. ನಿರಂತರ ಕಲಿಕೆಯಿಂದ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭ ಶಾಲೆಯ 185 ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಲಾಯಿತು. ಐಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಜಯಪ್ಪ, ಪ್ರಮೋದ್, ಪ್ರಮುಖರಾದ ರಮೇಶ್, ವರದರಾಜ ಅರಸ್, ಮಲ್ಲಪ್ಪ, ಶಾಲೆಯ ಮುಖ್ಯ ಶಿಕ್ಷಕ ರಜನೀಕಾಂತ್ ಹಾಗೂ ಶಿಕ್ಷಕರು ಇದ್ದರು.