

ಬೆಂಗಳೂರು: ನಗರದಲ್ಲಿ ಬೃಹತ್ ನೀರುಗಾಲುವೆ ನಿರ್ಮಾಣ ಸಂಬಂಧ 100 ಕೋಟಿ ರೂ. ಮೊತ್ತದ ಬಿಲ್ ಪಾವತಿಸಿದ್ದ ಕಡತ ಕಣ್ಮರೆಯಾಗಿರುವುದು ಬಿಬಿಎಂಪಿ ಮೊಗಸಾಲೆಯಲ್ಲಿ ಭಾರೀ ಸದ್ದು ಮಾಡಿದೆ.
ಎರಡು ವರ್ಷಗಳ ಹಿಂದೆ ಕಾಮಗಾರಿಗೆ ಅನುಮೋದನೆ ನೀಡಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿತ್ತು. ಆದರೆ, ಕಾಮಗಾರಿ ಕೈಗೊಳ್ಳದೆ ಅಷ್ಟೂ ಹಣವನ್ನು ಪಾವತಿಸಲಾಗಿದೆ. ಅಚ್ಚರಿಯೆಂದರೆ, ಹಣ ಬಟವಾಡೆ ಮಾಡಿರುವ ನೀಲುಗಾಲುವೆ ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡಿದೆ ಎಂಬುದನ್ನು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಈಗ ಪೇಚಿಗೆ ಸಿಲುಕಿದ್ದಾರೆ.
ಈ ವಿಷಯದ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತ ಬಿ.ಬಾಲಕೃಷ್ಣ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬಳಿಕ ಮಾಹಿತಿ ಆಯೋಗಕ್ಕೂ ಅರ್ಜಿ ಸಲ್ಲಿಸಿ ಬಿಲ್ ಪಾವತಿಸಿರುವ ಕಡತದ ಬಗ್ಗೆ ಮಾಹಿತಿ ಕೋರಿದ್ದರು. ವಿಚಾರಣೆ ವೇಳೆ ಪಾಲಿಕೆಯ ದಕ್ಷಿಣ ವಲಯದ ನೀರುಗಾಲುವೆ ವಿಭಾಗದ ಕಾರ್ಯಪಾಲಕ ಅಭಿಯಂತರರು ಮಾಹಿತಿ ನೀಡಲು ಹಿಂದೇಟು ಹಾಕಿದ್ದರು. ತಾಕೀತು ಮಾಡದ ಬಳಿಕ ೈಲ್ ಕಳೆದುಹೋಗಿದೆ ಎಂಬ ವರದಿಯನ್ನು ಸಲ್ಲಿಸಿದರು. ಈ ಸಂಗತಿಯಿಂದ ಹೌಹಾರಿದ ರಾಜ್ಯ ಮಾಹಿತಿ ಆಯುಕ್ತ ಎಚ್.ಸಿ.ಸತ್ಯನ್ ಅವರು ಅಧಿಕಾರಿಯ ಬೇಜವಾಬ್ದಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇತ್ತೀಚಿಗೆ ಪ್ರಕರಣದ ವಿಲೇವಾರಿ ಮಾಡುವ ವೇಳೆ ಕಡತ ಸಂರಕ್ಷಣೆ ಮಾಡಬೇಕಾದ ಸಂಬಂಧಿಸಿದ ವಿಷಯ ನಿರ್ವಾಹಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ ಎ್ಐಆರ್ ದಾಖಲಿಸಲು ಸೂಚಿಸಿದ್ದಾರೆ. ಒಂದು ವೇಳೆ ಸೂಚನೆ ಪಾಲಿಸಲು ವಿಲವಾದಲ್ಲಿ 25 ಸಾವಿರ ರೂ. ದಂಡ ಹಾಕುವ ಎಚ್ಚರಿಕೆಯನ್ನು ಮಾಹಿತಿ ಆಯುಕ್ತರು ನೀಡಿದ್ದಾರೆ.
ಡಿಸಿಎಂಗೆ ದೂರು ಸಲ್ಲಿಕೆ:
ನೀರುಗಾಲುವೆ ಕಾಮಗಾರಿ ಬಿಲ್‌ಗೆ ಸಂಬಂಧಿಸಿದ ಕಡತ ಕಾಣೆಯಾಗಿರುವ ಪ್ರಕರಣದ ಬಗ್ಗೆ ಮಾಹಿತಿ ಹಕ್ಕು ಅಧ್ಯಯನ ಕೇಂದ್ರವು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಿದೆ. ಪ್ರಕರಣದಲ್ಲಿ ಪಾಲಿಕೆಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.