

ಬೆಳಗಾವಿ:ಬೆಂಗಳೂರಿನ ಗಂಡನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಗಳು ಮೃತಪಟ್ಟಿದ್ದು, ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಬೆಳಗಾವಿ ನಗರ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಸ್ವಾತಿ ಶ್ರೀಧರ ಸನದಿ (28) ಬೆಂಗಳೂರಿನಲ್ಲಿ ಜು.12ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸ್ವಾತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ ಎಂಬಾತನನ್ನು 18 ತಿಂಗಳ ಹಿಂದೆ ವಿವಾಹವಾಗಿದ್ದಳು. ಜು.12ರಂದು ಬೆಂಗಳೂರಿನಲ್ಲಿ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವೇಳೆ ಗಂಡನ ಮನೆಯವರು ಸ್ವಾತಿ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ.
ಬೆಂಗಳೂರಿಗೆ ಹೋಗಿ ನೋಡಿದಾಗ ಶವ ಕಂಡು ಆತ್ಮಹತ್ಯೆ ಮಾಡಿಕೊಂಡಿಲ್ಲ. ಮೇಲ್ನೋಟಕ್ಕೆ ಕೊಲೆಯಾಗಿರುವ ಅನುಮಾನ ವ್ಯಕ್ತವಾಯಿತು. ಈ ಹಿನ್ನೆಲೆ ಬೆಂಗಳೂರಿನ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಅನುಮಾಮನಾಸ್ಪದ ದೂರು ದಾಖಲಿಸಿದ್ದೇವು. ತದನಂತರ ಪತಿ ಶ್ರೀಧರ ಪರಾರಿಯಾಗಿದ್ದ. ಅಲ್ಲದೆ, ಮಗಳ ಅಂತ್ಯಕ್ರಿಯೆಗೆ ಪತಿ ಕುಟುಂಬಸ್ಥರು ಯಾರು ಬಂದಿಲ್ಲ.
ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದ ಬಗ್ಗೆ ಈ ಹಿಂದೆ ಮಗಳು ಸ್ವಾತಿ ಹಿಂದೆ ಹೇಳಿಕೊಂಡಿದ್ದಳು. ಆಕೆಗೆ ಕಿರುಕುಳ ನೀಡಿ ಸಾಯಿಸಿದ್ದಾರೆ. ನ್ಯಾಯ ಕೊಡಿಸಿ ಎಂದು ಮೃತ ಸ್ವಾತಿ ಕುಟುಂಬಸ್ಥರು ಮನವಿ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೊರಸೆ, ಬೆಂಗಳೂರಿನಲ್ಲಿ ಮೃತಪಟ್ಟಿರುವ ಗೃಹಣಿಯ ಕುರಿತು ಮಾಹಿತಿ ಪಡೆದುಕೊಳ್ಳುತ್ತೇವೆ. ಅವಶ್ಯಬಿದ್ದರೆ ತನಿಖೆ ನಡೆಸಿ ನ್ಯಾಯ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.