ಲವ್ ಜಿಹಾದ್‌ಗೆ ಮಾಸೂರಿನ ಸ್ವಾತಿ ಬಲಿ

k.s. Eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಹಾವೇರಿ ಜಿಲ್ಲೆ ಮಾಸೂರಿನ ಸ್ವಾತಿ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪಆರೋಪಿಸಿದರು.

ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಕೊಲೆ ಮಾಡಿ ತುಂಗಭದ್ರಾ ನದಿಗೆ ಬಿಸಾಡಿ ಹೋಗಿದ್ದಾರೆ. ಇಂತಹ ಹೇಯ ಕೃತ್ಯವೆಸಗಿದ್ದರೂ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ.ಪರಮೇಶ್ವರ ಖಂಡಿಸದಿರುವುದು ದುರ್ದೈವದ ಸಂಗತಿ. ಸ್ವಾತಿ ನಿಮ್ಮ ಮಗಳಾಗಿದ್ದರೆ ಏನು ಮಾಡುತ್ತಿದ್ದೀರಿ ಎಂದು ಸಿಎಂ, ಗೃಹ ಸಚಿವರಿಗೆ ಪ್ರಶ್ನೆ ಮಾಡಿದರು.

ತಂದೆ ಇಲ್ಲದ ಸ್ವಾತಿಯನ್ನು ತಾಯಿಯೇ ಸಾಕಿ ಬೆಳೆಸಿದ್ದಾರೆ. ಆದರೆ ಇದೀಗ ಲವ್ ಜಿಹಾದ್‌ಗೆ ಬಲಿಯಾಗಿದ್ದು, ತುಂಗಭದ್ರಾ ನದಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಮಾಸೂರಿನಿಂದ ನಾಪತ್ತೆಯಾದ ದಿನವೇ ದೂರು ಕೊಟ್ಟಿದ್ದರೂ ಪೊಲೀಸರು ಪರಿಶೀಲಿಸದೆ ಆತುರಾತುರವಾಗಿ ಅಂತ್ಯಸಂಸ್ಕಾರ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದೂರು ಕೊಟ್ಟವರ‌್ಯಾರು ಎಂಬುದನ್ನೂ ನೋಡದೆ ಅಂತ್ಯಸಂಸ್ಕಾರ ಮಾಡಿದ್ದು ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರ ಎಂದು ಕಿಡಿಕಾರಿದರು.

ಮಂಗಳವಾರ ಮಾಸೂರಿಗೆ ಭೇಟಿ: ಒಂದೊಮ್ಮೆ ಮುಸ್ಲಿಂ ಯುವತಿಯರನ್ನು ಹಿಂದು ಯುವಕರು ಪ್ರೀತಿಯ ಹೆಸರಿನಲ್ಲಿ ವಂಚಿಸಿ ಕೊಲೆ ಮಾಡಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದರು ಎಂದ ಈಶ್ವರಪ್ಪ, ಮಂಗಳವಾರ ಮಾಸೂರಿಗೆ ಭೇಟಿ ನೀಡಿ ಸ್ವಾತಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ. ಸ್ವಾತಿ ಕೊಲೆ ಕೇಸಲ್ಲಿ ಯಾರನ್ನು ಬಂಧಿಸಿದ್ದರೂ ಅವರು ನಾಲ್ಕು ದಿನ ಜೈಲು, ಆಮೇಲೆ ಬೇಲ್(ಜಾಮೀನು) ಎನ್ನುವಂತಾಗಿದೆ. ಅದಕ್ಕೆ ಸರ್ಕಾರ ಆಸ್ಪದ ಕೊಡಬಾರದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net