

ಮಂಗಳೂರು: ಒಂದು ಕೈಯಲ್ಲೇ ಬರೆಯುವುದು ಕಷ್ಟವಾಗುತ್ತಿರುವ ಈ ಕಾಲಘಟ್ಟದಲ್ಲಿ ಈ ಪೋರಿ ಎರಡೂ ಕೈಗಳಲ್ಲೂ ಬರೆಯಬಲ್ಲಳು, ಅದೂ ಏಕಕಾಲಕ್ಕೆ! ಮಂಗಳೂರಿನ ಬಾಲಕಿ ಆದಿ ಸ್ವರೂಪಾ ಒಂದು ನಿಮಿಷಕ್ಕೆೆ 45ರಂತೆ ಇಂಗ್ಲಿಷ್ ಪದಗಳನ್ನು ಯುನಿ ಡೈರೆಕ್ಷನಲ್ ಶೈಲಿಯಲ್ಲಿ ಬರೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿಯ ಲಾಟಾ ಪ್ರತಿಷ್ಠಾನದ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್ (ಇಡಬ್ಲುೃಆರ್)ನಲ್ಲಿ ಇದು ಸೇರ್ಪಡೆಯಾಗಿದೆ.
ಇಲ್ಲಿನ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್-ಸುಮಾಡ್ಕರ್ ಪುತ್ರಿ ಸ್ವರೂಪಾ 2 ವರ್ಷಗಳ ಹಿಂದೆ ಎರಡೂ ಕೈಯಿಂದ ಬರೆಯುವುದನ್ನು ಆರಂಭಿಸಿದ್ದು, ಈಗ ಹತ್ತು ರೀತಿಗಳಲ್ಲಿ ಬರೆಯುವುದನ್ನು ರೂಢಿಸಿಕೊಂಡಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಶೈಲಿಗಳ ಪ್ರಾತ್ಯಕ್ಷಿಕೆ ನೀಡಿ, ಯುನಿಡೈರೆಕ್ಷನಲ್, ಒಪೋಸಿಟ್ ಡೈರೆಕ್ಷನ್, ರೈಟ್ ಹ್ಯಾಂಡ್ ಸ್ಪೀಡ್, ಲೆಫ್ಟ್‌ಹ್ಯಾಂಡ್ ಸ್ಪೀಡ್, ರಿವರ್ಸ್ ರನ್ನಿಂಗ್, ಮಿರರ್ ಇಮೇಜ್, ಹೆಟೆರೋಟೋಪಿಕ್, ಹೆಟೆರೋ ಲಿಂಗ್ವಿಸ್ಟಿಕ್, ಎಕ್ಸ್‌ಚೇಂಜ್, ಡ್ಯಾನ್ಸಿಂಗ್ ಮತ್ತು ಬ್ಲೈಂಡ್ ಫೋಲ್ಡ್, ಬ್ಲೈಂಡ್‌ಫೋಲ್ಡ್ ಶೈಲಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿದರೂ ಬೋರ್ಡ್ ಮೇಲೆ ಸರಿಯಾಗಿ ಬರೆದು ಅಚ್ಚರಿ ಮೂಡಿಸಿದರು. ಇದನ್ನೂ ಓದಿ: ಮಾಸ್ಕ್ ಇಲ್ಲದೆ ಓಡಾಡುವವರಿಗೆ ದಂಡದ ಬಿಸಿ, ಮೂರು ದಿನಗಳಲ್ಲಿ 34 ಸಾವಿರ ರೂ. ದಂಡ ವಸೂಲಿ
10 ಬಗೆಯ ವಿಶ್ವ ದಾಖಲೆಗೆ ಸಿದ್ಧತೆ: ಆದಿ ಸ್ವರೂಪಾ ಸಾಂಪ್ರದಾಯಿಕ ಶಾಲೆಗೆ ಹೋಗದೆ ನೇರವಾಗಿ 10ನೇ ತರಗತಿಯ ಸ್ವಕಲಿಕೆಯಲ್ಲಿ ತೊಡಗಿಕೊಂಡಿದ್ದು, ಶಾಲೆಗೆ ಹೋಗುವ ಮಕ್ಕಳಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾಳೆ. ಬೇರೆ ಹತ್ತು ಬಗೆಯ ವಿಶ್ವ ದಾಖಲೆಗೂ ಸಿದ್ಧತೆ ನಡೆಸುತ್ತಿದ್ದಾಳೆ. ಸಾಹಿತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ, ಮಿಮಿಕ್ರಿ, ಬೀಟ್‌ಬಾಕ್ಸ್, ನೆನಪು ಶಕ್ತಿಯ ತ್ರಯೋದಶ ಅವಧಾನ, ರೂಬಿಕ್ ಕ್ಯೂಬ್ ಇತ್ಯಾದಿ ವಿಷಯಗಳ ಅಧ್ಯಯನದಲ್ಲೂ ನಿರತಳಾಗಿದ್ದಾಳೆ. ಹಿಂದುಸ್ತಾನಿ ಸಂಗೀತ, ಯಕ್ಷಗಾನ, ಕಥಾ ಸಂಕಲನ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾಳೆ. ಸೆ.15ರಂದು 16ನೇ ಹುಟ್ಟುಹಬ್ಬ ಆಚರಿಸುತ್ತಿರುವ ಪುತ್ರಿಗೆ ವಿಶ್ವದಾಖಲೆಯ ಸಾಧನೆ ಹುಟ್ಟುಹಬ್ಬದ ಕೊಡುಗೆಯಾಗಿದೆ ಎಂದು ಗೋಪಾಡ್ಕರ್ ಹೇಳಿದರು.
ಎರಡೂವರೆ ವರ್ಷಕ್ಕೇ 30 ಪುಟ ಬರಹ!
ಕಲಿಸದೆ ಕಲಿಯುವ ಸ್ವರೂಪ ಶಿಕ್ಷಣದ ಸ್ವಕಲಿಕಾ ವಿಧಾನದಂತೆ ಒಂದೂವರೆ ವರ್ಷ ಪ್ರಾಯದಲ್ಲೇ ಓದಲು, ಎರಡೂವರೆ ವರ್ಷ ಪ್ರಾಯದಲ್ಲಿ ದಿನಕ್ಕೆ 30 ಪುಟಗಳಷ್ಟು ಬರೆಯುತ್ತಿದ್ದ ಆದಿ ಸ್ವರೂಪಾ, ಸ್ವಯಂ ಆಸಕ್ತಿಯಿಂದ ಅಭ್ಯಾಸ ಮಾಡಿ 10ನೇ ತರಗತಿಯ ಪರೀಕ್ಷೆೆಯನ್ನು ಖಾಸಗಿಯಾಗಿ ಎರಡೂ ಕೈಗಳಿಂದ ಬರೆಯಲು ಸಿದ್ಧರಾಗಿದ್ದಾರೆ.