

ಶಿರಸಿ: ಮೇಲ್ನೋಟಕ್ಕೆ ಏನೂ ಕಾರಣಗಳು ಕಾಣಿಸದಿದ್ದರೂ ನಮ್ಮ ಕಲ್ಪನೆಗೂ ಬಾರದ ರೀತಿಯಲ್ಲಿ ಕೆಲವೊಮ್ಮೆ ಆರೋಗ್ಯ ಸಮಸ್ಯೆ ಕಾಣಿಸುತ್ತವೆ. ಉತ್ತಮ ಆರೋಗ್ಯವೇ ಪುಣ್ಯದ ಫಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.
ಅವರು ಸ್ವರ್ಣವಲ್ಲೀ ಮಠದಲ್ಲಿ ಸಂಕಲ್ಪಿತ ತಮ್ಮ 34ನೇ ಹಾಗೂ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಮಾಹಾ ಸ್ವಾಮೀಜಿಗಳ ಪ್ರಥಮ ಚಾತುರ್ಮಾಸ್ಯದಲ್ಲಿ ಇಸಳೂರು ಸೀಮೆಯ ಶಿಷ್ಯರ ಸೇವೆ ಸ್ವೀಕರಿಸಿ ಭಾನುವಾರ ಅವರು ಮಾತನಾಡಿದರು.
ನಮ್ಮ ಅನೇಕ ಸಮಸ್ಯೆಗಳಿಗೆ ಸೂಕ್ಷ್ಮ ಕಾರಣಗಳು ಇರುತ್ತವೆ. ನಮಗೆ ಗೊತ್ತಿಲ್ಲದ ಸೂಕ್ಷ್ಮ ಕಾರಣಗಳು ಇನ್ನೂ ಹಲವು ಇರುತ್ತವೆ. ಜಗತ್ತಿನಲ್ಲಿ ಗೋಚರಿಸದೆ ಇರುವ ಸೂಕ್ಷ್ಮ ಕಾರಣಗಳೇ ಹೆಚ್ಚಿಗೆ ಕೆಲಸ ಮಾಡುತ್ತವೆ. ಕಾರಣ ಗೊತ್ತಾಗದೆ ಸಮಸ್ಯೆಗಳನ್ನು ಎದುರಿಸುತ್ತ ಇರುತ್ತೇವೆ. ಸ್ಥೂಲ ಶರೀರದ ವ್ಯಾಧಿಗಳಿಗೆ ಸೂಕ್ಷ್ಮ ಶರೀರವೇ ಕಾರಣ. ಸ್ವಪ್ನಾವಸ್ಥೆಯಲ್ಲಿ ಗೋಚರವಾಗುವ ಶರೀರಗಳೇ ಸೂಕ್ಷ್ಮ ಶರೀರ. ಸೂಕ್ಷ್ಮ ಶರೀರದಲ್ಲಿ ಮನಸ್ಸು ಒಂದು ಮುಖ್ಯವಾದ ಭಾಗ. ಸೂಕ್ಷ್ಮ ಶರೀರವು ಅನೇಕ ಜನ್ಮ ನಮ್ಮ ಜೊತೆ ಬರುತ್ತವೆ. ಸ್ಥೂಲ ಶರೀರ ಹಾಗಲ್ಲ. ಈ ಜನ್ಮದಲ್ಲೇ ನಾಶವಾಗಿ ಹೋಗುತ್ತದೆ. ಸೂಕ್ಷ್ಮ ಶರೀರದಲ್ಲಿ ಹಿಂದಿನ ಜನ್ಮಗಳ ವಾಸನೆಗಳು ಇರುತ್ತವೆ. ನಮಗೆ ಒಳ್ಳೆಯದನ್ನು ಮಾಡುವ ಕೆಲವು ವಾಸನೆಗಳೂ ಇರುತ್ತವೆ. ಅವುಗಳನ್ನು ಪುಣ್ಯ ಎಂದು ಕರೆಯುತ್ತೇವೆ. ಅನೇಕ ವಾಸನೆಗಳು ರೋಗಕ್ಕೆ ಕಾರಣವಾಗುತ್ತವೆ. ಅವುಗಳನ್ನು ಪಾಪಗಳು ಎಂದು ಕರೆಯುತ್ತೇವೆ.
ಔಷಧಿ, ದಾನ, ಜಪ, ಹೋಮ, ಅರ್ಚನೆ, ಪ್ರಾರ್ಥನೆ ಇವುಗಳನ್ನು ಮಾಡುವುದರ ಮೂಲಕ ರೋಗದ ಶಮನ ಮಾಡಿಕೊಳ್ಳಬಹುದು ಎಂದರು. ರೋಗಗಳಿಗೆ ಕಾರಣವಾಗುವ ಸಂಗತಿಗಳನ್ನು ಜಪ, ಹೋಮ, ದಾನಗಳ ಮೂಲಕ ಮೊದಲೇ ನಾಶ ಮಾಡಬಹುದು. ಆದರೆ, ನಮಗೆ ಗೊತ್ತಾಗುವುದಿಲ್ಲ. ಮೊದಲೇ ರೋಗದ ಲಕ್ಷಣಗಳನ್ನು ಕಂಡುಕೊಳ್ಳಲು ಜ್ಯೋತಿಷವು ತುಂಬ ಸಹಾಯಕಾರಿ. ಜನ್ಮ ಕುಂಡಲಿಗಳ ಮೂಲಕ ಅದನ್ನು ಕಂಡುಕೊಂಡು ಪರಿಹಾರವನ್ನು ಮೊದಲೇ ಮಾಡಿಕೊಳ್ಳಲು ಸಾಧ್ಯ ಎಂದರು.
ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಸೀಮೆಯ ಪ್ರಮುಖರಾದ ಸತ್ಯನಾರಾಯಣ ಭಟ್, ಶ್ರೀಪಾದ ಭಟ್ಟ, ಪ್ರಸನ್ನ ಭಟ್ಟ ಇತರರು ಇದ್ದರು.